ADVERTISEMENT

ಜಿಲ್ಲಾ ಬಿಜೆಪಿಯಲ್ಲಿ ‘ನವೀನ’ ಅಧ್ಯಾಯ

ಕಾಯುವಿಕೆಗೆ ಕೊನೆಗೂ ತೆರೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಒಲಿದ ಅವಕಾಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 22:45 IST
Last Updated 14 ಜನವರಿ 2024, 22:45 IST
ನವೀನ ಗುಳಗಣ್ಣನವರ್
ನವೀನ ಗುಳಗಣ್ಣನವರ್   

ಪ್ರಮೋದ

ಕೊಪ್ಪಳ: ಸೂರ್ಯನ ಪಥ ಬದಲಿಸುವ ಸಂಕ್ರಾಂತಿ ಸಂಭ್ರಮದ ಮುನ್ನಾದಿನ ಕೊಪ್ಪಳ ಜಿಲ್ಲಾ ಬಿಜೆಪಿಯಲ್ಲಿ ‘ನವೀನ’ ಅಧ್ಯಾಯ ಶುರುವಾಗಿದೆ. ಹಲವು ದಿನಗಳ ಕಾಯುವಿಕೆ ಅಂತ್ಯಗೊಂಡಿದ್ದು, ಹಾಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಗುಳಗಣ್ಣನವರ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯ ನಿಟ್ಟಿನಲ್ಲಿ ಪಕ್ಷ ಸಂಘಟನೆ ಜವಾಬ್ದಾರಿಯ ಹೊಣೆ ಯಾರ ಹೆಗಲಿಗೆ ಬೀಳಲಿದೆ ಎನ್ನುವ ಕುತೂಹಲವಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರ ಆಯ್ಕೆ ಕೊನೆಗೂ ಅಂತಿಮಗೊಂಡಿದ್ದು, ಪಕ್ಷದ ಯುವ ನಾಯಕ ನವೀನ ಅವರಿಗೆ ಈ ಅವಕಾಶ ಲಭಿಸಿದೆ.

ADVERTISEMENT

ಇದಕ್ಕೂ ಮೊದಲು ಅವರು ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮತ್ತು ಸದಸ್ವತ್ಯ ಅಭಿಯಾನ ಸಂಚಾಲಕರಾಗಿ ಕೆಲಸ ಮಾಡಿದ್ದರು. ಈ ಬಾರಿಯ ಜಿಲ್ಲಾಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಇಷ್ಟು ದಿನ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳಾಗಿದ್ದರೂ ವರಿಷ್ಠರು ರಾಜ್ಯಾಧ್ಯಕ್ಷರನ್ನೇ ನೇಮಿಸಿರಲಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದ ಕೆಲವೇ ದಿನಗಳಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆಯೂ ವೇಗ ಪಡೆದುಕೊಂಡಿತ್ತು.

ಇದಕ್ಕಾಗಿ ಜಿಲ್ಲೆಯಿಂದ ಹಲವು ಜನ ವರಿಷ್ಠರಿಗೆ ಮನವಿ ಸಲ್ಲಿಸಿದರು. ಆರಂಭದಲ್ಲಿ ನಾಲ್ಕೈದು ಜನರ ಹೆಸರುಗಳಷ್ಟೇ ಕೇಳಿ ಬಂದಿದ್ದವು. ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದ ವರಿಷ್ಠರು ಆಕಾಂಕ್ಷಿಗಳು ಮತ್ತು ಪಕ್ಷದ ಪ್ರಮುಖರಿಂದ ಇತ್ತೀಚೆಗೆ ಅಭಿಪ್ರಾಯ ಸಂಗ್ರಹಿಸಿತ್ತು.

ಆಗ ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನ, ಕಾರಟಗಿ ತಾಲ್ಲೂಕಿನ ಮರ್ಲಾನಹಳ್ಳಿಯ ರಮೇಶ ನಾಡಿಗೇರ, ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಮಾಧ್ಯಮ ವಕ್ತಾರ ಕೊಪ್ಪಳದ ಮಹೇಶ ವಿ. ಅಂಗಡಿ, ಕಾರಟಗಿ ತಾಲ್ಲೂಕಿನ ಬುದಗುಂಪಾದ ಗುರುಸಿದ್ದಪ್ಪ ಯರಕಲ್‌, ಕೊಪ್ಪಳದ ಚಂದ್ರಶೇಖರ ಕವಲೂರ, ಕಾರಟಗಿಯ ಅಮರೇಶಪ್ಪ ಕುಳಗಿ, ಯಲಬುರ್ಗಾ ತಾಲ್ಲೂಕಿನ ಹುಣಶಿಹಾಳದ ಅಯ್ಯನಗೌಡ ಆರ್‌. ಕೆಂಚಮ್ಮನವರ ಮತ್ತು ಯಲಬುರ್ಗಾದ ಬಸಲಿಂಗಪ್ಪ ಭೂತೆ ನಮಗೂ ಅವಕಾಶ ಕೊಡಿ ಎಂದಿದ್ದರು.

ಪಟ್ಟಿಯಲ್ಲಿ ಹತ್ತು ಜನರಿದ್ದರೂ ಕೆಲವರ ಹೆಸರು ಮಾತ್ರ ’ಶಾರ್ಟ್‌ ಲಿಸ್ಟ್‌’ನಲ್ಲಿತ್ತು. ಈ ಪಟ್ಟಿಯಲ್ಲಿದ್ದವರು ಪಕ್ಷದ ವರಿಷ್ಠರು ಮತ್ತು ತಮ್ಮ ಆಪ್ತರ ಬಳಿ ‘ನಮಗೊಂದು ಅವಕಾಶ ಕೊಡಿ’ ಎಂದು ಮನವಿ ಮಾಡುತ್ತಲೇ ಬಂದಿದ್ದರು. ಪಕ್ಷ ಅಂತಿಮವಾಗಿ ನವೀನ ಅವರಿಗೆ ಅವಕಾಶ ಕಲ್ಪಿಸಿದೆ.

Highlights - null

ದೊಡ್ಡ ಜವಾಬ್ದಾರಿ; ಸಂತಸ ನಿರಂತರ ಫೋನ್‌ ಕರೆಗಳ ನಡುವೆಯೂ ‘ಪ್ರಜಾವಾಣಿ’ ಜೊತೆ ಮಾತನಾಡಿದ ನವೀನ ಗುಳಗಣ್ಣನವರ್ ‘ಪಕ್ಷದಲ್ಲಿ ದೊಡ್ಡ ಅವಕಾಶ ಲಭಿಸಿದೆ. ಇದಕ್ಕೆ ಕಾರಣರಾದ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲ ಹಿರಿಯರಿಗೆ ಧನ್ಯವಾದಗಳು’ ಎಂದರು.  ‘ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಜಿಲ್ಲಾಧ್ಯಕ್ಷನಾಗುವ ಅವಕಾಶ ಬಂದಿದ್ದು ಖುಷಿಯ ಸಂಗತಿ. ಇದನ್ನು ಪಕ್ಷದ ಹಿರಿಯುರು ಯುವಕರು ಮತ್ತು ಮಹಿಳೆಯರು ಹೀಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ನಿರ್ವಹಣೆ ಮಾಡುವೆ. ವರಿಷ್ಠರು ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವೆ’ ಎಂದು ಸಂತೋಷದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.