
ಕೊಪ್ಪಳ: ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಕಾಣಿಸಿಕೊಂಡಿವೆ ಎನ್ನುವ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಮಂಗಳವಾರ ಶಾಲೆಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.
ತಾಲ್ಲೂಕಿನ ಬಿಸರಳ್ಳಿಯ ನೃಪತುಂಗ ಅನುದಾನಿತ ಪ್ರೌಢಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು ಬಿಸಿಊಟದ ಪರಿಶೀಲನೆ ನಡೆಸಿ, ಶಾಲೆಯ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಅವರ ಸಮಸ್ಯೆಗಳನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡರು. ಜಿಲ್ಲಾಧಿಕಾರಿ ತಾವೇ ತಟ್ಟೆ ತೊಳೆದುಕೊಂಡು ಸರತಿಯಲ್ಲಿ ನಿಂತುಕೊಂಡು ಮಕ್ಕಳ ಜೊತೆಗೆ ಬಿಸಿಯೂಟ ಮಾಡಿದರು.
ಅಡುಗೆ ಕೋಣೆಗೆ ಹೋಗಿ ಆಹಾರ ಸಾಮಗ್ರಿಗಳ ಪರಿಶೀಲನೆ ನಡೆಸಿ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಆಹಾರ ನೀಡಬೇಕೆಂದು ಶಾಲೆಯ ಮುಖ್ಯ ಗುರುಗಳಿಗೆ ಸೂಚಿಸಿದರು. ಮಕ್ಕಳಿಂದಲೂ ಮಾಹಿತಿ ಪಡೆದಿದ್ದು, ಶಾಲೆಯ ಇನ್ನಷ್ಟು ಅಭಿವೃದ್ಧಿಯಾಗಬೇಕಾದ ಅಗತ್ಯವಿದೆ ಎನ್ನುವ ಹೇಳಿಕೆಗಳು ವ್ಯಕ್ತವಾದವು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ. ಕೃಷಮೂರ್ತಿ. ಲೋಕಾಯುಕ್ತ ಡಿವೈಎಸ್‌ಪಿ, ಶಾಲೆಯ ಮುಖ್ಯಶಿಕ್ಷಕ ಬಸವರಾಜ, ಪಿಡಿಒ ಶ್ರೀನಿವಾಸ ಪತ್ತಾರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಅನಿತಾ ಸೇರಿದಂತೆ ಅನೇಕರು ಇದ್ದರು.
ಪರಿಶೀಲನೆ: ಇದಕ್ಕೂ ಮೊದಲು ಅಧಿಕಾರಿಗಳು ನಗರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಗಟು ಮಾರಾಟ ಮಳಿಗೆಗೆ ಭೇಟಿ ನೀಡಿ ಅಲ್ಲಿ ಅಕ್ಕಿ, ಗೋಧಿ, ಬೆಳೆ ಪರಿಶೀಲಿಸಿದರು.
ಕ್ರಿಮಿಕೀಟಗಳು ಆಗದಂತೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸಬೇಕು. ಸ್ವಚ್ಛಗೊಳಿಸಿದ ಕುರಿತು ವರದಿಯ ದಾಖಲೆಗಳನ್ನು ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಅಡುಗೆಯವರ ಬದಲಾವಣೆ
ಕೊಪ್ಪಳ: ಅಡುಗೆಯಲ್ಲಿ ಹುಳುಗಳು ಕಂಡುಬಂದಿದ್ದರಿಂದ ಬಿಸರಳ್ಳಿಯ ನೃಪತುಂಗ ಅನುದಾನಿತ ಪ್ರೌಢಶಾಲೆಯ ಅಡುಗೆ ಮಾಡುವವರನ್ನು ಬದಲಾವಣೆ ಮಾಡಲಾಗಿದೆ. ತಾಲ್ಲೂಕಿನ ಹೊಸಲಿಂಗಾಪುರದ ಸರ್ಕಾರಿ ಶಾಲೆಯಲ್ಲಿಯೂ ಹುಳುಗಳು ಬಂದಿದ್ದವು ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡಿತ್ತು. ಆದರೆ ವಿಡಿಯೊದಲ್ಲಿ ಇರುವುದು ನಿಜವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.