ADVERTISEMENT

ವಿಭಾಗಮಟ್ಟದ ಕ್ರೀಡಾಕೂಟ ಅಚ್ಚುಕಟ್ಟಾಗಿ ನಿರ್ವಹಿಸಿ

ಕಲಬುರಗಿ ವಿಭಾಗಮಟ್ಟದ ಕ್ರೀಡಾಕೂಟ ಕುರಿತು ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:56 IST
Last Updated 4 ಅಕ್ಟೋಬರ್ 2019, 14:56 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಖೋಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್‌ಬಾಲ್ ಕ್ರೀಡೆ ಸಂಘಟಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಖೋಖೋ, ಬಾಲ್ ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್‌ಬಾಲ್ ಕ್ರೀಡೆ ಸಂಘಟಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಮಾತನಾಡಿದರು   

ಕೊಪ್ಪಳ: ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿಕೊಕ್ಕೊ, ಬಾಲ್ ಬ್ಯಾಡ್ಮಿಂಟನ್ ಹಾಗೂ ಹ್ಯಾಂಡ್‌ಬಾಲ್ ಕ್ರೀಡೆಗಳನ್ನು ಜಿಲ್ಲೆಯಲ್ಲಿ ಸಂಘಟಿಸಲಾಗುತ್ತಿದ್ದು, ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಕ್ರೀಡೆ ಸಂಘಟಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗದ ಆರು ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಅ. 12ರಂದು ಕೊಕ್ಕೊ ನಡೆಯಲಿದ್ದು, ಒಟ್ಟು 24 ತಂಡಗಳು ಭಾಗವಹಿಸಲಿವೆ. ಈ ಕ್ರೀಡೆಗೆ ಭಾಗವಹಿಸುವ ತಂಡಗಳೆಲ್ಲವೂ ಅ. 11ರಂದು ನೋಂದಣಿ ಮಾಡಿಕೊಳ್ಳಬೇಕು ಎಂದರು.

ADVERTISEMENT

ಅ. 16ರಂದು ಹ್ಯಾಂಡ್‌ಬಾಲ್ ಕ್ರೀಡೆ ನಡೆಯಲಿದ್ದು, ಒಟ್ಟು 24 ತಂಡಗಳು ಭಾಗವಹಿಸಲಿವೆ. ಭಾಗವಹಿಸುವ ಎಲ್ಲ ತಂಡಗಳು ಅ. 15ರಂದು ನೋಂದಣಿ ಮಾಡಿಕೊಳ್ಳಬೇಕು. ಹಾಗೆಯೇ ನ. 5 ಮತ್ತು 6ರಂದು ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರಿಗಾಗಿ ಹ್ಯಾಂಡಬಾಲ್ ಕ್ರೀಡೆಗಳು ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎಂದರು.

ಬಾಲಕರ 16 ತಂಡಗಳು ಹಾಗೂ ಬಾಲಕಿಯರ 16 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಈ ಎರಡೂ ಕ್ರೀಡಾಕೂಟಗಳಲ್ಲಿ ಅಂದಾಜು 1400 ಕ್ರೀಡಾಪಟುಗಳು, 230ಕ್ಕೂ ಹೆಚ್ಚು ತಂಡದ ವ್ಯವಸ್ಥಾಪಕರು, ನಿರ್ಣಾಯಕರು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ ಎಂದರು.

ಭಾಗವಹಿಸುವ ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರಿಗೆ ವಸತಿ ವ್ಯವಸ್ಥೆ, ಊಟ-ಉಪಹಾರದ ವ್ಯವಸ್ಥೆ, ಕ್ರೀಡಾಂಗಣಕ್ಕೆ ಕರೆದು ತರುವ ಮತ್ತು ಕರೆದೊಯ್ಯುವ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿರಬೇಕು. ಕ್ರೀಡಾಪಟುಗಳು ಉಳಿದುಕೊಳ್ಳಲು ಅಗತ್ಯ ಮೂಲ ಸೌಕರ್ಯಗಳಿರುವ ವಸತಿ ನಿಲಯದ ವ್ಯವಸ್ಥೆ ಮಾಡಬೇಕು. ತುರ್ತು ಆರೋಗ್ಯ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಸಾರಿಗೆ ವ್ಯವಸ್ಥೆಗಾಗಿ ವಿವಿಧ ಶಾಲೆಗಳ ಶಾಲಾ ವಾಹನಗಳನ್ನು ಬಳಸಿಕೊಳ್ಳಿ. ಈ ಎಲ್ಲ ಕಾರ್ಯಗಳಿಗೂ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ದೈಹಿಕ ಶಿಕ್ಷಣಅಧಿಕಾರಿ ಎ.ಬಸವರಾಜ, ಕ್ರೀಡಾ ಇಲಾಖೆಯ ಅಧಿಕಾರಿ ಶರಣಬಸವ ಬಂಡಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.