ADVERTISEMENT

‘ಬೆಳಕು’ ತಂದ ದೀಪಾವಳಿ

ಹಬ್ಬದ ಪ್ರಯುಕ್ತ ಹೆಚ್ಚಿದ ಬೇಡಿಕೆ, ಬೆಲೆ ದ್ವಿಗುಣ: ರೈತರ ಮೊಗವರಳಿಸಿದ ಚೆಂಡು ಹೂ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:14 IST
Last Updated 16 ನವೆಂಬರ್ 2020, 5:14 IST
ಕುಷ್ಟಗಿಯ ಚಿರಂಜೀವಿ ಹಿರೇಮಠ ಅವರ ತೋಟದಲ್ಲಿ ಬೆಳೆದ ಚೆಂಡು ಹೂ
ಕುಷ್ಟಗಿಯ ಚಿರಂಜೀವಿ ಹಿರೇಮಠ ಅವರ ತೋಟದಲ್ಲಿ ಬೆಳೆದ ಚೆಂಡು ಹೂ   

ಕುಷ್ಟಗಿ: ದಸರಾ ಸಂದರ್ಭದಲ್ಲಿ ಕಡಿಮೆ ಇದ್ದ ಚೆಂಡು ಹೂವಿನ ಬೆಲೆ ದೀಪಾವಳಿ ವೇಳೆಗೆ ದ್ವಿಗುಣಗೊಂಡು ರೈತರ ಬದುಕಿಗೆ ಭರವಸೆಯ ಬೆಳಕನ್ನು ಹೊತ್ತು ತಂದಿದೆ.

ಪಟ್ಟಣ ಸೇರಿದಂತೆ ತಾಲ್ಲೂಕು, ಜಿಲ್ಲೆಯ ಅನೇಕ ರೈತರು ಈ ಬಾರಿ ಚೆಂಡು ಹೂ ಬೇಸಾಯ ಮಾಡಿ, ಕೈತುಂಬ ಹಣ ಸಂಪಾದನೆ ಮಾಡಿದ್ದಾರೆ. ಅಂಥವರಲ್ಲಿ ಇಲ್ಲಿಯ ಚಿರಂಜೀವಿ ಹಿರೇಮಠ ಎಂಬುವವರು ಕೂಡ ಒಬ್ಬರು. ಅವರು ಇಡಿಯಾಗಿ ಬೆಳೆಯದೆ ಮೂಲ ಬೆಳೆಯ ನಡುವೆ ಅಂತರ ಬೆಳೆಯಾಗಿ ಚೆಂಡು ಹೂವು ಬೆಳೆದಿದ್ದಾರೆ. ಈಗ ಉತ್ತಮ ಫಸಲು ಬಂದಿದೆ.

ತಮ್ಮ ಮೂರೂವರೆ ಎಕರೆ ತೋಟದಲ್ಲಿ ಮಾವು, ಪಪ್ಪಾಯ ಬೆಳೆದಿದ್ದು, ಅದರ ಮಧ್ಯೆ ಚೆಂಡು ಹೂವಿನ ಸಸಿ ನಾಟಿ ಮಾಡಿದ್ದರು. ಚೆಂಡು ಹೂ ಒಂದು ರೀತಿಯಲ್ಲಿ ಔಷಧೀಯ ಸಸ್ಯವೂ ಹೌದು, ಇತರೆ ಬೆಳೆಗಳಿಗೆ ಬೇರುಗಳ ಮೂಲಕ ಹರಡುವ ಕೀಟ, ಶಿಲೀಂಧ್ರ ಬಾಧೆಯನ್ನೂ ನಿವಾರಿಸುತ್ತದೆ. ಹಾಗಾಗಿ ಇದು ಎರಡು ರೀತಿಯಲ್ಲಿ ಅನುಕೂಲ ಎನ್ನಲಾಗಿದೆ. ಹಾಗಾಗಿ ಪಪ್ಪಾಯ ಬೆಳೆಯ ಮಧ್ಯೆ ಹಿರೇಮಠ ಅವರು ಚೆಂಡು ಹೂ ಬೆಳೆದಿದ್ದಾರೆ. ಇದಕ್ಕಾಗಿ ವಿಶೇಷವಾಗಿ ಹಾಗೂ ಹೆಚ್ಚಿನ ರೀತಿಯ ಆರೈಕೆ ಮಾಡಿಲ್ಲ.

ADVERTISEMENT

‘ನಾಟಿ ಮಾಡಿದ ಎರಡು ತಿಂಗಳಲ್ಲಿ ಹೂವು ಕಟಾವು ಆಗಿದ್ದು, ನಂತರ ಅದರ ಗಿಡಗಳನ್ನು ಕಿತ್ತು ಪಪ್ಪಾಯ ಗಿಡಗಳ ಬುಡಕ್ಕೆ ಹಾಕುತ್ತೇವೆ. ಸಸಿಗಳು ಸೇರಿ ಅಂದಾಜು ₹70-₹80 ಸಾವಿರ ಖರ್ಚು ತಗುಲಿದೆ’ ಎಂದು ಹೇಳಿದರು.

ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಒಟ್ಟು ಸುಮಾರು 50 ಕ್ವಿಂಟಲ್ ಪ್ರಮಾಣದ ಹೂವು ಕಟಾವು ಮಾಡಲಾಗಿದೆ. ದಸರಾ ವೇಳೆ ಹೂವಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಕೆ.ಜಿಗೆ ₹25 ರಂತೆ ಸುಮಾರು 30 ಕ್ವಿಂಟಲ್‌ ಮಾರಾಟವಾಗಿತ್ತು. ಆದರೆ ವೇಳೆ ಬಂಪರ್‌ ಇಳುವರಿ ಮತ್ತು ದರ ಎರಡರಲ್ಲೂ ಸಮತೋಲನವಾಗಿದ್ದು, ಕನಿಷ್ಠ ₹80 ಗರಿಷ್ಠ ₹100ವರೆಗಿನ ದರದಲ್ಲಿ ಸುಮಾರು 25 ಕ್ವಿಂಟಲ್ ಹೂವು ಮಾರಾಟವಾಗಿದೆ. ಹುಬ್ಬಳಿ, ವಿಜಯಪುರ, ಗದಗ, ಸ್ಥಳೀಯ ವ್ಯಾಪಾರಸ್ಥರು ತೋಟಕ್ಕೆ ಬಂದು ಹೂವುಗಳನ್ನು ಖರೀದಿಸಿದ್ದಾರೆ ಎಂದು ರೈತ ಚಿರಂಜೀವಿ ಹಿರೇಮಠ ಸಂತಸ ಹಂಚಿಕೊಂಡರು.

ಹಿರೇಮಠ ಅವರು ಮಾವು, ಪಪ್ಪಾಯ, ಮಹಾಗನಿ ಗಿಡಗಳನ್ನು ನಿಗದಿತ ಅಂತರದಲ್ಲಿ ಬೆಳೆದಿದ್ದು ಸಸ್ಯಗಳು ಉತ್ತಮ ರೀತಿಯಲ್ಲಿವೆ. ಕೊರೊನಾ ಕಾರಣಕ್ಕೆ ಲಾಕ್‌ಡೌನ್‌ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಮನೆ ಬಿಟ್ಟು ಹೋಗುವಂತಿರಲಿಲ್ಲ. ಹಾಗಾಗಿ ಆ ಸಮಯವನ್ನು ತೋಟದಲ್ಲಿಯೇ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಯಿತು. ಹೆಚ್ಚಿನ ಶ್ರಮ ವಹಿಸಿ ಆರೈಕೆಯಲ್ಲಿ ತೊಡಗಿದ್ದರಿಂದ ಗಿಡಗಳ ಬೆಳವಣಿಗೆ ಉತ್ತಮ ರೀತಿಯಲ್ಲಿದೆ ಎಂದೂ ಹೇಳಿದರು.

ಗಗನಕ್ಕೇರಿದ ಹೂವಿನ ಬೆಲೆ: ದೀಪಾವಳಿ ಸಂದರ್ಭದಲ್ಲಿ ಚೆಂಡು ಹೂ, ಸೇವಂತಿಗೆ ಸೇರಿ ಇತರೆ ವಿವಿಧ ಹೂವುಗಳ ಕೊರತೆ ಕಂಡುಬಂದಿದ್ದು, ಹೂವಿನ ಬೆಲೆ ಗಗನಕ್ಕೇರಿತ್ತು. ದೀಪಾವಳಿ ಹಬ್ಬದಲ್ಲಿ ಅಂಗಡಿಗಳಿಗೆ, ಲಕ್ಷ್ಮೀ ಪೂಜೆಗೆ ಚೆಂಡು ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಹೂವಿನ ಆವಕ ಕಡಿಮೆ ಇತ್ತು. ಹಾಗಾಗಿ ಪ್ರತಿ ಕೆಜಿಗೆ ₹180-₹200ರ ವರೆಗೆ ಮಾರಾಟವಾದವು. ಹೂವಿನ ಬೆಲೆ ದುಬಾರಿಯಾದರೂ ಪೂಜೆಗೆ ಬೇಕೇಬೇಕು ಎಂದು ಪಟ್ಟಣದ ದಲ್ಲಾಳಿ ವರ್ತಕ ಬಸವರಾಜ ಪ್ರತಿಕ್ರಿಯಿಸಿದರು. ಅದೇ ರೀತಿ ಬಾಳೆಕಂಬ, ಹಣ್ಣುಗಳ ಬೆಲೆಯಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿತು ಎಂದು ಜನರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.