ADVERTISEMENT

ಕುಕನೂರು: ದೀಪಾವಳಿ ಖರೀದಿ ಬಲು ಜೋರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:59 IST
Last Updated 21 ಅಕ್ಟೋಬರ್ 2025, 4:59 IST
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಚಂಡು ಹೂ ಖರೀದಿಸುತ್ತಿರುವ ಗ್ರಾಹಕರು
ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಚಂಡು ಹೂ ಖರೀದಿಸುತ್ತಿರುವ ಗ್ರಾಹಕರು   

ಕುಕನೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಸ್ಥರು ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಲಕ್ಷ್ಮಿ ಪೂಜೆ ಮಾಡಲು ಬೇಕಾದ ಹೂವು, ಹಣ್ಣು, ಇತರೆ ಪೂಜಾ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು.

ವೀರಭದ್ರಪ್ಪ ವೃತ್ತ, ಬಸ್‌ ನಿಲ್ದಾಣ, ತೇರಿನ ಗಡ್ಡಿ ಹತ್ತಿರ ವಿವಿಧ ನಮೂನೆಯ ಹಣ್ಣು, ಹೂವಿನ ಹಾರ, ಅಡಿಕೆ ಹೂವು, ಚೆಂಡು ಹೂವು, ಇತರೆ ಸಾಮಗ್ರಿಗಳು ದುಬಾರಿ ಇದ್ದರೂ ವರ್ತಕರೊಂದಿಗೆ ಚೌಕಾಸಿ ಮಾಡಿ ಖರೀದಿಸಿದರು.

ಲಕ್ಷ್ಮಿ ಪೂಜೆ ನಂತರ ಟ್ಯ್ರಾಕ್ಟರ್‌, ಲಾರಿ, ಮಿನಿ ಬಸ್, ಕಾರು, ದ್ವಿಚಕ್ರವಾಹನ ವಾಹನಗಳ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ತಳಿರು, ತೋರಣ, ಹೂವು, ಬಾಳೆಗೊನೆಗಳಿಂದ ಅಲಂಕಾರಗೊಳಿಸಿ ಮಹಾಮಾಯಿ ದೇವಸ್ಥಾನ ಸೇರಿದಂತೆ ಪಟ್ಟಣದ ಇತರೆ ದೇಗುಲಗಳಿಗೆ ತಂದು ಪೂಜೆ ಸಲ್ಲಿಸಿದರು.

ADVERTISEMENT

ಮಕ್ಕಳು, ಯುವತಿಯರು, ಮಹಿಳೆಯರು ಹೊಸ ಬಟ್ಟೆ, ಬೆಲೆ ಬಾಳುವ ಬಂಗಾರದ ಆಭರಣ ಧರಿಸಿ, ತಮ್ಮ ಅಂಗಡಿಗಳಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮನೆ, ಅಂಗಡಿಗಳಲ್ಲಿ ಎಣ್ಣೆ ದೀಪ, ಆಲಂಕಾರಿಕ ಆಕಾಶಪುಟ್ಟಿಗಳು ಗಮನ ಸೆಳೆಯಿತು. ವರ್ತಕರು ತಮ್ಮ ಅಂಗಡಿಗಳಲ್ಲಿ ದುಡಿಯುವ ಶ್ರಮಿಕ ವರ್ಗದವರನ್ನು ಮನೆಗೆ ಕರೆಯಿಸಿ ಸಿಹಿ ಊಟ ಮಾಡಿಸಿ, ಹೊಸ ಬಟ್ಟೆ, ಖುಷಿ ರೂಪದಲ್ಲಿ ಒಂದಿಷ್ಟು ನಗದು ಹಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಲಕ್ಷ್ಮಿ ಪೂಜೆಗೆ ಬಂದ ಅತಿಥಿಗಳಿಗೆ ಅಂಗಡಿಕಾರರು ಕಲ್ಲು ಸಕ್ಕರೆ, ಬಾಳೆಹಣ್ಣು ಇತರೆ ಸಿಹಿ ತಿನ್ನಿಸು ನೀಡಿ ಗೌರವಿಸುವುದು ವಾಡಿಕೆ.

ಕೆಲ ಕಡೆ ವ್ಯಾಪಾರ ಜೋರಾಗಿ ನಡೆದರೆ, ಅಲ್ಲಲ್ಲಿ ಮಂದಗತಿಯಲ್ಲಿ ಸಾಗಿದ್ದು ಕಂಡು ಬಂತು. ಪಟ್ಟಣದ ಪ್ರಮುಖ ಸ್ಥಳದಲ್ಲಿ ಜನಸಂದಣಿ ತುಂಬ ಇತ್ತು ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.

ಪಟಾಕಿ ನಿಷೇದ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಪಟಾಕಿ ಸದ್ದು ಮೆರಗು ನೀಡುತ್ತದೆ, ಇಲ್ಲಿನ ವ್ಯಾಪಾರಿಗಳು ಸ್ಪರ್ಧೆ ಎನ್ನುವಂತೆ ತಮ್ಮ ತಮ್ಮ ಅಂಗಡಿ, ಮುಂಗಟ್ಟುಗಳ ಮುಂದೆ ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಗಮನ ಸೆಳೆಯುತ್ತಾರೆ ಆದರೆ ಈ ವರ್ಷ ಪಟಾಕಿ ಮಾರಾಟಕ್ಕೆ ನಿಷೇದ ಹೇರಿದೆ.

ಹಸಿರು ಪಟಾಕಿ ಮಾತ್ರ ದೀಪಾವಳಿ ಹಬ್ಬದ ಪಟಾಕಿ ಸಿಡಿಸಬೇಕೆಂದು ಸರ್ಕಾರದ ಆದೇಶಕ್ಕೆ ಪಟಾಕಿ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.