ADVERTISEMENT

ಕೃಷಿ ಇಲಾಖೆ ನೀಡಿದ ಔಷಧ ಕಳಪೆ: ಈರುಳ್ಳಿಗೆ ಶಿಲೀಂಧ್ರ ರೋಗ

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ನಾರಾಯಣರಾವ ಕುಲಕರ್ಣಿ
Published 6 ಅಕ್ಟೋಬರ್ 2021, 5:30 IST
Last Updated 6 ಅಕ್ಟೋಬರ್ 2021, 5:30 IST
ಕುಷ್ಟಗಿ ಹೊರವಲಯದಲ್ಲಿನ ಜಮೀನಿಗೆ ಭೇಟಿ ನೀಡಿದ ಡಾ.ಎಂ.ಬಿ.ಪಾಟೀಲ, ಡಾ.ವಾಮನಮೂರ್ತಿ ರೈತರಿಗೆ ಮಾಹಿತಿ ನೀಡಿದರು
ಕುಷ್ಟಗಿ ಹೊರವಲಯದಲ್ಲಿನ ಜಮೀನಿಗೆ ಭೇಟಿ ನೀಡಿದ ಡಾ.ಎಂ.ಬಿ.ಪಾಟೀಲ, ಡಾ.ವಾಮನಮೂರ್ತಿ ರೈತರಿಗೆ ಮಾಹಿತಿ ನೀಡಿದರು   

ಕುಷ್ಟಗಿ: ಈ ಭಾಗದಲ್ಲಿ ಕಟಾವು ಹಂತದಲ್ಲಿರುವ ಈರುಳ್ಳಿಗೆ ‘ನೇರಳೆ ಮಚ್ಚೆ’ ಶಿಲೀಂಧ್ರ ರೋಗ ಹೆಚ್ಚುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಮುಂಗಾರು ಹಂಗಾಮಿನಲ್ಲಿ ಕುಷ್ಟಗಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಎರೆ ಜಮೀನಿನಲ್ಲಿ ಬೆಳೆದಿರುವ ಈರುಳ್ಳಿಗೆ ಈ ರೋಗ ಬಾಧೆ ಕಾಣಿಸಿಕೊಂಡಿದೆ. ರೈತರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ ರೋಗ ವ್ಯಾಪಕವಾಗಿ ಹರಡುತ್ತದೆ ಎಂದು ಕೃಷಿ, ತೋಟಗಾರಿಕೆ ಮೂಲಗಳು ತಿಳಿಸಿವೆ.

ಟೆಂಗುಂಟಿ ರಸ್ತೆಯಲ್ಲಿನ ನಾಗಪ್ಪ ನೆರೆಬೆಂಚಿ ಎಂಬ ರೈತರ ಜಮೀನಿಗೆ ಭೇಟಿ ನೀಡಿದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಬಿ.ಪಾಟೀಲ ಹಾಗೂ ತೋಟಗಾರಿಕೆ ಇಲಾಖೆಯ ಸಂಪನ್ಮೂಲ ವ್ಯಕ್ತಿ ಡಾ.ವಾಮನಮೂರ್ತಿ ಪುರೋಹಿತ,‘ಇದೊಂದು ಮಳೆ ಆಧಾರಿತ ಶಿಲೀಂಧ್ರ ರೋಗ. ಮಳೆ ಮತ್ತು ಬಿಸಿಲಿನ ವಾತಾವರಣದಿಂದ ಆಗುತ್ತಿರುವ ಏರುಪೇರಿನಿಂದ ಹೆಚ್ಚು ಬಾಧಿಸುತ್ತದೆ’ ಎಂದು ಹೇಳಿದರು.

ADVERTISEMENT

ಜಮೀನುಗಳು ಫಲವತ್ತತೆ ಕಳೆದುಕೊಂಡಿರುವುದು, ಅಸಮರ್ಪಕ ರೀತಿಯಲ್ಲಿ ಪೋಷಕಾಂಶಗಳ ನಿರ್ವಹಣೆ, ಅವೈಜ್ಞಾನಿಕ ಔಷಧಗಳ ಸಿಂಪಡೆಣೆ, ರಾಸಾಯನಿಕ ಗೊಬ್ಬರಗಳ ಹೆಚ್ಚಿನ ಬಳಕೆ. ಇಂಥ ಹಲವಾರು ಕಾರಣಗಳಿಂದ ಬೆಳೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ’ ಎಂದು ಅವರು ಹೇಳಿದರು.

ಲಕ್ಷಣಗಳು: ಈರುಳ್ಳಿ ಎಲೆ (ಸೊಪ್ಪು) ಮೇಲೆ ಬಿಳಿ ಬಣ್ಣದ ಮಚ್ಚೆಗಳು ಕಂಡು ಬರುತ್ತವೆ. ತುದಿಯಿಂದ ಒಣಗಿ ಬುಡವೆಲ್ಲ ಕಂದುಬಣ್ಣಕ್ಕೆ ತಿರುಗಿ ಎಲೆಗಳು ಇಳಿ ಬೀಳುತ್ತವೆ. ಕೆಲ ದಿನಗಳ ನಂತರ ಹಸಿರು ಎಲೆಗಳೆಲ್ಲ ಒಣಗಿ ಹೋಗುತ್ತವೆ. ಮಳೆಯಾದರೆ ರೋಗ ಮತ್ತಷ್ಟು ಹೆಚ್ಚುತ್ತದೆ ಎಂದು ವಿವರಿಸಿದರು.

ಪ್ರತಿ ಎಕರೆಗೆ 12 ಕೆ.ಜಿಯಂತೆ ಬೋರಾನ್‌ ಯುಕ್ತ ಕ್ಯಾಲ್ಸಿಯಂ ನೈಟ್ರೇಟ್ (ಸಿಎನ್‌) ಹಾಕಬೇಕು. ಪ್ರಾರಂಭದಲ್ಲಿ ಒಂದು ಕ್ವಿಂಟಲ್‌ ಕೊಟ್ಟಗೆ ಗೊಬ್ಬರಕ್ಕೆ 2 ಕೆ.ಜಿ ಟ್ರೈಕೋಡರ್ಮಾ ಜೈವಿಕ ಗೊಬ್ಬರ ಬೆರೆಸಿ ಭೂಮಿಗೆ ಚೆಲ್ಲಬೇಕು. ರೈತರು ಯಾವುದೇ ಬೆಳೆ ಬೆಳೆದರೂ ಬೇಸಾಯ, ರೋಗ, ಕೀಟ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಅನುಸುವುದು ಅಗತ್ಯ ಎನ್ನುತ್ತಾರೆ ತೋಟಗಾರಿಕೆ ಸಂಪನ್ಮೂಲ ವ್ಯಕ್ತಿ ಡಾ.ವಾಮನಮೂರ್ತಿ ಪುರೋಹಿತ ಅವರು.

ತಾಲ್ಲೂಕಿನಲ್ಲಿ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ನೇರಳೆ ಮಚ್ಚೆರೋಗ ನಿಯಂತ್ರಣಕ್ಕೆ ರೈತರಿಗೆ ಅಗತ್ಯ ಸಲಹೆ, ಸೂಚನೆ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.