ADVERTISEMENT

ಹೇಮಗುಡ್ಡ: ಹೇಮಗುಡ್ಡದ ದಸರಾ ಎಷ್ಟೊಂದು ಸುಂದರ

ಆನೆಯ ರಾಜಗಾಂಭೀರ್ಯದ ನಡೆ, ಭಕ್ತರ ಕಣ್ಮನ ಸೆಳೆದ ವೈಭವದ ಅಲಂಕಾರ

ಪ್ರಮೋದ
Published 5 ಅಕ್ಟೋಬರ್ 2022, 20:00 IST
Last Updated 5 ಅಕ್ಟೋಬರ್ 2022, 20:00 IST
ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ಮಂಗಳವಾರ ನಡೆದ ದಸರಾ ಅಂಬಾರಿ ಮೆರವಣಿಯ ನೋಟ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರು
ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ಮಂಗಳವಾರ ನಡೆದ ದಸರಾ ಅಂಬಾರಿ ಮೆರವಣಿಯ ನೋಟ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರು   

ಹೇಮಗುಡ್ಡ (ಕೊಪ್ಪಳ): ಅಲಂಕೃತಗೊಂಡ ಆನೆ ರಾಜ ಗಾಂಭೀರ್ಯದಿಂದ ದುರ್ಗಾ ಪರಮೇಶ್ವರಿದೇವಿಯ ಮೂರ್ತಿ ಹೊತ್ತು ಹೆಜ್ಜೆ ಹಾಕುತ್ತಿದ್ದರೆ; ಸುತ್ತಲೂ ಇದ್ದ ಭಕ್ತರು ಜೈಕಾರ ಹಾಕುತ್ತಿದ್ದರು. ಮೆರವಣಿಗೆಯುದ್ದಕ್ಕೂ ಜನರು ಹೂವಿನ ಮಳೆಗೆರೆದರು.

ಇದು ಏಳು ಗುಡ್ಡಗಳ ಸಾಲಿನಲ್ಲಿರುವ ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ಮಂಗಳವಾರ ಕಂಡು ಬಂದ ದಸರಾ ವೈಭವ. ಹೇಮಗುಡ್ಡದಲ್ಲಿ ನಡೆದ ಅಂಬಾರಿ ಮೆರವಣಿಗೆ ಜನರ ಕಣ್ಮನ ಸೆಳೆಯಿತು. ಸುಂದರವಾಗಿ ಅಲಂಕೃತಗೊಳಿಸಲಾಗಿದ್ದ ಆನೆಯ ಮೇಲೆ ದೇವಿಯ ಸುಂದರ ಅಲಂಕಾರ ನೋಡುಗರನ್ನು ಭಕ್ತಿ ಪರವಶರನ್ನಾಗಿ ಮಾಡಿತು.

ದೇವಸ್ಥಾನದಲ್ಲಿ ಪರಮೇಶ್ವರಿದೇವಿಯ ಮೂರ್ತಿ ಹಾಗೂ ಆಂಜನೇಯನ ಮೂರ್ತಿಗೆ ದಸರಾ ಅಂಗವಾಗಿ ಒಂಬತ್ತು ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಿತ್ಯ ಸಾವಿರಾರು ಜನ ದೇವಿಯ ದರ್ಶನ ಪಡೆದರು. ಅಂಬಾರಿ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಹಾಗೂ ನೆರೆ ಜಿಲ್ಲೆಗಳ ಜನ ಬಂದಿದ್ದರು. ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಆರಂಭವಾದ ಮೆರವಣಿಗೆ ಮುಖ್ಯರಸ್ತೆಯ ತನಕ ಸಾಗಿತು. ದಾರಿಯುದ್ದಕ್ಕೂ ಪೂಜೆ, ಮಂತ್ರ, ಹೂವಿನ ಮಳೆಗೆರೆಯಲಾಯಿತು.

ADVERTISEMENT

ಆಯುಧ ಪೂಜೆ ದಿನವೇ ಅಂಬಾರಿ ಮೆರವಣಿಗೆ ನಡೆದಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ ಅದರಲ್ಲಿಯೇ ಹೇಮಗುಡ್ಡಕ್ಕೆ ಬಂದಿದ್ದರು. ವಿದ್ಯುತ್‌ ದೀಪಗಳು ಹೊಳಪು, ತಳಿರು ತೋರಣ, ರಂಗೋಲಿ, ಬಾಳೆ ದಿಂಡು, ಪೂಜೆ ಹೀಗೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಧ್ವಜಸ್ಥಂಬ ವಿಜೃಂಭಿಸಿದವು. ಜನ ಈ ಸುಂದರ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳನ್ನು ಸೆರೆ ಹಿಡಿಯುವುದು ಸಾಮಾನ್ಯವಾಗಿತ್ತು. ದೇವಸ್ಥಾನದಲ್ಲಿ ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿಯೂ ದೇವಿಯ ಆಶೀರ್ವಾದ ಪಡೆದರು.

ಹಲವು ದಶಕಗಳಿಂದ ಹೇಮಗುಡ್ಡದಲ್ಲಿ ನಾಡಹಬ್ಬದ ಮಾದರಿಯಲ್ಲಿ ದಸರಾ ನಡೆಸಿಕೊಂಡು ಬಂದಿರುವ ಮಾಜಿ ಸಂಸದ ಎಚ್‌.ಜಿ. ರಾಮುಲು, ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ್‌ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು. ರಾಮುಲು ಕುಟುಂಬಸ್ಥರಾದ ಎಚ್‌.ಎಸ್‌. ಭರತ್‌, ಸರ್ವೇಶ್, ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಬಿಜೆಪಿ ನಿಕಟಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ರಥೋತ್ಸವ: ನವರಾತ್ರಿ ಅಂಗವಾಗಿ ಕೊಪ್ಪಳ ಕೋಟೆ ಪ್ರದೇಶದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಜರುಗಿತು. ಇದಕ್ಕೆ ನೂರಾರು ಜನ ಸಾಕ್ಷಿಯಾದರು.

‘ಸುಧಾ’ ಜಾಗ ತುಂಬಿದ ‘ಲಕ್ಷ್ಮಿ’

ಹೇಮಗುಡ್ಡ: ದಸರಾ ಉತ್ಸವದಲ್ಲಿ ಹೇಮಗುಡ್ಡದ ದೇವಿಯ ಅಂಬಾರಿ ಹೊರುವ ಹೆಣ್ಣು ಅನೆ ‘ಸುಧಾ’ ಕಳೆದ ವರ್ಷ ಮೃತಪಟ್ಟಿದ್ದರಿಂದ ಈ ವರ್ಷ ಆ ಜಾಗವನ್ನು ಹಂಪಿಯ ‘ಲಕ್ಷ್ಮಿ’ ತುಂಬಿದ್ದಳು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಿಪ್ಪಲಕಟ್ಟಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ್ದಾಗಿ ಸುಧಾ 25 ವರ್ಷಗಳಿಂದ ಹೇಮಗುಡ್ಡದಲ್ಲಿ ದೇವಿಯ ಅಂಬಾರಿ ಹೊತ್ತು ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.