ಯಲಬುರ್ಗಾ: ತಾಲ್ಲೂಕಿನ ಗೆದಗೇರಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾಮಮ್ಮದೇವಿ ಉತ್ಸವ ಐದು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು. ದೇವಿಯ ಉತ್ಸವದ ಪ್ರಯುಕ್ತ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲಾಗಿದೆ. ಭಕ್ತರ ದೇಣಿಗೆಯೊಂದಿಗೆ ಜೀರ್ಣೋದ್ದಾರ ಕೈಗೊಳ್ಳಲಾಗಿದೆ.
ಕಳೆದ ಶನಿವಾರ ಚಾಲನೆ ದೊರೆತ ದೇವಿ ಉತ್ಸವವು ಗ್ರಾಮದ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ಥಳಗಳಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಭಕ್ತರು ಉಡಿ ತುಂಬುವುದು ಹಾಗೂ ವಿಶೇಷ ಪೂಜೆ ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು. ಉತ್ಸವ ಮುಕ್ತಾಯಗೊಂಡ ನಂತರ ಗ್ರಾಮದ ಸೀಮೆಗೆ ಹಾಲು ಮತ್ತು ತುಪ್ಪ ಎರೆದರು.
ನೀರಿನ ಓಕಳಿ: ದೇವಿಯ ಉತ್ಸವದ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರು ಪರಸ್ಪರ ನೀರಿನ ಓಕಳಿ ಆಡಿ ಸಂಭ್ರಮಿಸಿದರು. ಗ್ರಾಮದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.