ADVERTISEMENT

ರೈತನ ಕೈಹಿಡಿದ ಎರೆಹುಳು ಕೃಷಿ

ಬಸಾಪಟ್ಟಣ: ಘಟಕ ಸ್ಥಾಪನೆ, ಮೂರು ತಿಂಗಳಲ್ಲಿ 8 ಟನ್‌ ಗೊಬ್ಬರ ಮಾರಾಟ

​ಪ್ರಜಾವಾಣಿ ವಾರ್ತೆ
Published 12 ಮೇ 2021, 11:31 IST
Last Updated 12 ಮೇ 2021, 11:31 IST
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಯುವ ಕೃಷಿಕ ರಾಘವೇಂದ್ರ ಅವರ ಎರೆಹುಳು ಗೊಬ್ಬರ ಘಟಕ
ಗಂಗಾವತಿ ತಾಲ್ಲೂಕಿನ ಬಸಾಪಟ್ಟಣ ಗ್ರಾಮದ ಯುವ ಕೃಷಿಕ ರಾಘವೇಂದ್ರ ಅವರ ಎರೆಹುಳು ಗೊಬ್ಬರ ಘಟಕ   

ಗಂಗಾವತಿ: ತಾಲ್ಲೂಕಿನ ಬಸಾಪಟ್ಟಣದ ಯುವ ರೈತ ರಾಘವೇಂದ್ರ ಅವರು ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿಯೂ ಎರೆಹುಳು ಕೃಷಿ ಮಾಡಿ ಕೈತುಂಬಾ ಆದಾಯ ಗಳಿಸಿದ್ದಾರೆ. ಈ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.

ಪ್ರಸ್ತುತ ರೈತರು ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಹಾಗೂ ದರ ಸಿಗದೆ ಕಂಗಾಲಾಗಿದ್ದಾರೆ.

ಆದರೆ, ರಾಘವೇಂದ್ರ ಅವರು ತೋಟಗಾರಿಕಾ ಬೆಳೆಗಾರರಿಗೆ ಇದ್ದಲ್ಲಿಯೇ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಆರು ತಿಂಗಳ ಹಿಂದೆ ಎರೆಹುಳು ಗೊಬ್ಬರ ಉತ್ಪಾದನೆಯ ಕುರಿತು ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಇತರ ರೈತರಿಂದ ತಾಂತ್ರಿಕ ಸಲಹೆ ಪಡೆದಿದ್ದಾರೆ. ₹2 ಲಕ್ಷ ವೆಚ್ಚದಲ್ಲಿ ತಾವೇ ಎರೆಹುಳು ಘಟಕ ಸ್ಥಾಪಿಸಿದ್ದಾರೆ. ಮೂರು ತಿಂಗಳಲ್ಲಿ 8 ಟನ್‌ ಗೊಬ್ಬರ ಮಾರಾಟ ಮಾಡಿದ್ದಾರೆ.

ಎರೆಹುಳು ಗೊಬ್ಬರಕ್ಕೆ ಟ್ರೈಕೊಡರ್ಮ, ಪೆಸಿಲೋಮಿಸಿಸ್ ಮತ್ತು ಸ್ಯೂಡೋಮೊನಾಸ್ ಮೌಲ್ಯವರ್ಧನೆ ಮಾಡಿ ಅದನ್ನು ಕೆ.ಜಿ ಗೆ ₹11 ರಂತೆ ಮಾರಾಟ ಮಾಡುತ್ತಿದ್ದಾರೆ.

ಆರು ಲಕ್ಷ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಲ್ಲದೆ, ಭತ್ತಕ್ಕೆ ಪರ್ಯಾಯವಾಗಿ ಉಪ ಕಸುಬುಗಳನ್ನು ಮಾಡುವುದರಿಂದ ಆದಾಯ ವೃದ್ಧಿಸಿಕೊಳ್ಳಬಹುದು ಎಂದು ಇತರರಿಗೆ ತೋರಿಸಿ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.