ADVERTISEMENT

ವಿದ್ಯಾವಂತರಿಂದ ದೇಶದಲ್ಲಿ ಅಶಾಂತಿ

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:43 IST
Last Updated 2 ಮಾರ್ಚ್ 2021, 4:43 IST
ಕನಕಗಿರಿಯಲ್ಲಿ ಭಾನುವಾರ ನಡೆದ ಭಾವೈಕ್ಯ ಕಾರ್ಯಕ್ರಮವನ್ನು ಶಾಸಕ ಬಸವರಾಜ ದಢೇಸೂಗೂರು ಉದ್ಘಾಟಿಸಿದರು
ಕನಕಗಿರಿಯಲ್ಲಿ ಭಾನುವಾರ ನಡೆದ ಭಾವೈಕ್ಯ ಕಾರ್ಯಕ್ರಮವನ್ನು ಶಾಸಕ ಬಸವರಾಜ ದಢೇಸೂಗೂರು ಉದ್ಘಾಟಿಸಿದರು   

ಕನಕಗಿರಿ: ‘ರಾಜಕಾರಣಿಗಳು, ಕಾವಿಧಾರಿಗಳು ಹಾಗೂ ವಿದ್ಯಾವಂತರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಅವಿದ್ಯಾವಂತರಿಗಿಂತ ಹೆಚ್ಚಾಗಿ ವಿದ್ಯಾವಂತರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ’ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ವಿಷಾದಿಸಿದರು.

ಇಲ್ಲಿನ ಇಬ್ರಾಯಿಂ ಜಾಮಿಯಾ ಮಸೀದಿ ಸಮಿತಿ ಹಾಗೂ ಸೂಪರ್ ಕಾಂಕ್ರಿಟ್ ಬ್ರಿಕ್ಸ್ ಇಂಡಸ್ಟ್ರೀಸ್‌ ಸಹಯೋಗದಲ್ಲಿ ಪೇಟೆ ಬಸವೇಶ್ವರ ದೇವಸ್ಥಾನದ ಎದುರು ಭಾನುವಾರ ಆಯೋಜಿಸಲಾಗಿದ್ದ ಭಾವೈಕ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾವಂತರು ಎನಿಸಿಕೊಂಡವರೇ ಜನರಲ್ಲಿ ಮತೀಯ ವಿಚಾರಗಳನ್ನು ಬಿತ್ತುತ್ತಿದ್ದಾರೆ. ಜಾತಿ ವಿನಾಶಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಜಾತಿ ಪದ್ಧತಿ ನಿರ್ಮೂಲನೆ ಸಾಧ್ಯ’ ಎಂದು ಅವರು ತಿಳಿಸಿದರು. ‘ಎಲ್ಲ ಜಾತಿ, ಧರ್ಮದವರಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬಲ್ಲದು. ಇದಕ್ಕೂ ಮುಂಚೆ ಜಾತಿ ವ್ಯವಸ್ಥೆ ದೂರವಾಗಬೇಕು. ಜಾತಿ ಆಧಾರದ ಮೇಲೆ ಚುನಾವಣೆಯಲ್ಲಿ ಟಿಕೆಟ್ ನೀಡುವುದು, ಕೇಳುವುದನ್ನು ನಿಲ್ಲಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಹಣ, ಆಸ್ತಿ, ಸಂಪತ್ತಿಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ಶರಣರು, ವಚನಕಾರರು, ಸೂಫಿಗಳು ಜಾತಿ ವಿನಾಶಕ್ಕೆ ಹಗಲಿರುಳು ಶ್ರಮಿಸಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಯಿಂ ಮಾತನಾಡಿ,‘ಭಾವೈಕ್ಯ ಎಂಬುದು ಮನುಷ್ಯನ ಹೃದಯದಿಂದ ಬರಬೇಕೆ ವಿನಾಃ ಜಾತಿ, ಧರ್ಮಗಳಿಂದಲ್ಲ. ಎಲ್ಲ ಧರ್ಮಗಳು ಶಾಂತಿ, ಸೌಹಾರ್ದತೆ ಸಂದೇಶಗಳನ್ನು ಸಾರಿವೆ. ಕ್ಷುಲ್ಲಕ ವಿಚಾರಗಳಿಗೆ ಕಿವಿಗೊಡದೆ ಸರ್ವ ಧರ್ಮದವರು ಏಕತೆಯಿಂದ ಬದುಕಬೇಕು’ ಎಂದು ಹೇಳಿದರು.

ಮಂಗಳೂರಿನ ಮೌಲಾನ್ ಅಬು ಸೂಫಿಯಾನ್ ಮದನಿ ಮಾತನಾಡಿ,‘ಜಾತಿ, ಧರ್ಮ, ಕುಲ, ಮತ, ಭಾಷೆಗಳನ್ನು ಹೊರಗಿಟ್ಟು ಭಾವೈಕ್ಯ ರಾಷ್ಟ್ರ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ಸೂಳೇಕಲ್‌ನ ಭುವನೇಶ್ವರಯ್ಯ ತಾತ, ಶಾಸಕ ಬಸವರಾಜ ದಢೇಸೂಗೂರು, ಮಾಜಿ ಶಾಸಕ ಶಿವರಾಜ ತಂಗಡಗಿ ಹಾಗೂ ತಾ.ಪಂ. ಮಾಜಿ ಸದಸ್ಯ ನೂರುಸಾಬ ಗಡ್ಡಿಗಾಲ ಮಾತನಾಡಿದರು. ಸುವರ್ಣಗಿರಿಯ ಡಾ.ಚನ್ನಮಲ್ಲಸ್ವಾಮಿ, ಅರಳಹಳ್ಳಿಯ ಗವಿಸಿದ್ದಯ್ಯ , ಅರಬ್ಬಿ ಶಾಲೆಯ ಮೌಲಾನ್ ಮಹ್ಮದ ಸಜ್ಜಾದ ರಜಾ ನೂರಿ, ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ, ಎಂ. ಮಲ್ಲಿಕಾರ್ಜುನ ನಾಗಪ್ಪ, ಹಸನಸಾಬ ದೋಟಿಹಾಳ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಜಡಿಯಪ್ಪ ಮುಕ್ಕುಂದಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಮಾಣಿಕ ಭೋಲಾ, ಸದಸ್ಯರಾದ ಶಾಂತಾ ರಮೇಶ ನಾಯಕ, ಲಕ್ಷ್ಮವ್ವ ಸಿದ್ದಪ್ಪ ನೀರ್ಲೂಟಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ್, ಎಪಿಎಂಸಿ ನಿರ್ದೇಶಕ ದೇವಪ್ಪ ತೋಳದ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ ಹಾಗೂ ಮಸೀದಿ ಸಮಿತಿ ಅಧ್ಯಕ್ಷ ಪೀರಸಾಬ ಬೀಡಿ ಇದ್ದರು. ಕಲಾವಿದರಾದ ಜೀವನಸಾಬ ಬಿನ್ನಾಳ ಹಾಗೂ ಮೆಹಬೂಬ ಕಿಲ್ಲೆದಾರ ತತ್ವಪದಗಳನ್ನು ಹಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಶೇಖಬಾಬು ನಿರೂಪಿಸಿದರು. ಇಮಾಮಸಾಹೇಬ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.