ಗಂಗಾವತಿ: ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿಗೆ ಶುಕ್ರವಾರ ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆಯ ಗೊಂದಲದಿಂದ ಎರಡನೇ ಬಾರಿಗೆ ಚುನಾವಣೆ ರದ್ದಾಗಿದೆ.
ಇಲ್ಲಿನ ಟಿಎಪಿಎಂಸಿಎಂಎಸ್ ಆಡಳಿತ ಮಂಡಳಿ ಚುನಾವಣೆಗೆ 12 ಸದಸ್ಯರ ಪೈಕಿ 4 ಸದಸ್ಯರು ಮಾತ್ರ ಭಾಗವಹಿಸಿದ್ದರು. ಚುನಾವಣೆ ಪ್ರಕ್ರಿಯೆ ನಡೆಸಲು ಕನಿಷ್ಠ 7 ಸದಸ್ಯರ ಅಗತ್ಯವಿರುವುದರಿಂದ ಕೋರಂ ಕೊರತೆ ಕಂಡು ಬಂತು. ಕೋರಂ ಇದೆ. ಚುನಾವಣಾಧಿಕಾರಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಚುನಾವಣೆ ಮುಂದೂಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಆರೋಪಿಸಿದರು.
ಸುಮಾರು 60 ವರ್ಷಗಳ ಇತಿಹಾಸವಿರುವ ಟಿಎಪಿಸಿಎಂಎಸ್‌ಗೆ ನಗರ ವ್ಯಾಪ್ತಿಯಲ್ಲಿ ಕೋಟ್ಯಂತರ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಆವಕ ವಹಿವಾಟೂ ಇದೆ. ಟಿಎಪಿಸಿಎಂಎಸ್ 15 ಸದಸ್ಯರನ್ನು ಒಳಗೊಂಡಿದ್ದು, ಜು.19ರಂದು ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನ ಚುನಾವಣೆಗೆ ಬಿಜೆಪಿ ಬೆಂಬಲಿತ ಜೋಗದ ನಾರಾಯಣಪ್ಪ ನಾಯಕ ಮತ್ತು ಮಳಿಗಿ ಚನ್ನಪ್ಪ ನಾಮಪತ್ರ ಸಲ್ಲಿಸಿದ್ದರು. ಆಗೂ ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲಾಗಿತ್ತು.
ಚುನಾವಣೆಗಾಗಿ ಸಹಕಾರ ಪ್ರಾಧಿಕಾರಕ್ಕೆ ಮಳಿಗಿ ಚನ್ನಪ್ಪ ಬೆಂಬಲಿತರು ಮೊರೆ ಹೋಗಿದ್ದರಿಂದ ಚುನಾವಣೆ ಸೆ.12ರಂದು ನಿಗದಿಪಡಿಸಲಾಗಿತ್ತು. ಮತ್ತೆ ಕೋರಂ ಕಾರಣ ನೀಡಿ ಮತ್ತೊಮ್ಮೆ ಚುನಾವಣೆ ಮುಂದೂಡಲಾಗಿದೆ.
ತಿಕ್ಕಾಟ: ಸಹಕಾರಿ ಇಲಾಖೆ ಕಾಯ್ದೆನ್ವಯ ಚುನಾವಣೆ ನಡೆಸುತ್ತಿಲ್ಲವೆಂದು ಅಭ್ಯರ್ಥಿ ಮಳಿಗೆ, ಚುನಾವಣಾಧಿಕಾರಿ ಶಿವಾಜಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಕಚೇರಿಯಲ್ಲಿ ಕೆಲ ನಿಮಿಷಗಳ ಕಾಲ ಜಟಾಪಟಿ ಜೊತೆಗೆ ಗೊಂದಲವೂ ನಡೆಯಿತು.
15 ಸದಸ್ಯರಲ್ಲಿ ಗುಂಜಳ್ಳಿ ರಾಜಶೇಖರಪ್ಪ ನಿಧನರಾಗಿದ್ದು, ಪಿಎಸ್‌ಸೆಸ್‌ಸೆನ್ ಚುನಾವಣೆಯಲ್ಲಿ ಪರಭಾವಗೊಂಡ ಸುಭಾಶ್ಚಂದ್ರ ತಿಪ್ಪಶೆಟ್ಟಿ, ಬಸವನಗೌಡ ಮತ ಚಲಾವಣೆಯಿಂದ ಅನರ್ಹತೆಗೊಂಡಿದ್ದರಿಂದ 12 ಸದಸ್ಯರನ್ನು ಪರಿಗಣಿಸುವಂತೆ ಮಳಿಗಿ ಚನ್ನಪ್ಪ ಬೆಂಬಲಿಗರು ಒತ್ತಾಯಿಸಿದರು. ಆದರೆ ಮೂವರನ್ನೂ ಪರಿಗಣಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಶಿವಾಜಿ ಹೇಳಿದ್ದರಿಂದ ಗೊಂದಲ ಸೃಷ್ಟಿಯಾಯಿತು.
ಅವ್ಯವಹಾರ ನಡೆಸಲು ಮುಂದಕ್ಕೆ ಆರೋಪ
ಸಂಸ್ಥೆಯಲ್ಲಿ ಕೋಟ್ಯಂತರ ಹಣ ಅವ್ಯವಹಾರವಾಗಿದೆ. ಹೊಸ ಆಡಳಿತ ಮಂಡಳಿ ರಚನೆಯಾದರೇ ಅವ್ಯವಹಾರ ಮಾಡಲು ಅವಕಾಶವಿರುವುದಿಲ್ಲ ಎನ್ನುವ ಕಾರಣಕ್ಕೆ ಚುನಾವಣೆ ನಡೆಸುತ್ತಿಲ್ಲ. ಇದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಕೈವಾಡವಿದೆ. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಮೊರೆ ಹೋಗಲಾಗುತ್ತದೆ ಎಂದು ಅಭ್ಯರ್ಥಿ ಮಳಿಗಿ ಚೆನ್ನಪ್ಪ ಹೇಳಿದರು.
ಚುನಾವಣೆ ಪ್ರತಿಷ್ಠೆ: ಮಾಜಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಜಿ.ವೀರಪ್ಪ ಬೆಂಬಲಿಗರ ನಡುವಿನ ಪ್ರತಿಷ್ಠೆಯಿಂದ ಚುನಾವಣೆ ಮುಂದೂಡಲಾಗಿದೆ. ಅಭ್ಯರ್ಥಿ ಜೋಗದ ನಾರಾಯಣಪ್ಪ ನಾಯಕ ಮತ್ತು ಮಳಿಗೆ ಚನ್ನಪ್ಪ ನಡುವೆ ಜಿದ್ದಾಜಿದ್ದಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕೋರಂ ಕೊರತೆಯಿಂದ ಚುನಾವಣೆ ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಸದಸ್ಯರಿಗೆ ತಿಳಿಸಲಾಗುತ್ತದೆ.– ಶಿವಾಜಿ, ಚುನಾವಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.