ADVERTISEMENT

ಕರಾಳ ದಿನಾಚರಣೆ: ಜನ ತುರ್ತುಸ್ಥಿತಿ ಇತಿಹಾಸ ಅರಿಯಲಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 4:34 IST
Last Updated 27 ಜೂನ್ 2022, 4:34 IST
ಕುಷ್ಟಗಿಯಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನರಾವ್‌ ಅವರನ್ನು ಸನ್ಮಾನಿಸಲಾಯಿತು
ಕುಷ್ಟಗಿಯಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನರಾವ್‌ ಅವರನ್ನು ಸನ್ಮಾನಿಸಲಾಯಿತು   

ಕುಷ್ಟಗಿ: ‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ವಿಚಾರ ಸೇರಿದಂತೆ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗಿನ ಕರಾಳ ದಿನಗಳ ಇತಿಹಾಸವನ್ನು ಭವಿಷ್ಯದ ಯುವ ಪೀಳಿಗೆ ಹಾಗೂ ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದಲ್ಲಿ ಭಾನುವಾರ ನಡೆದ 1975ರ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಕರಾಳ ದಿನಾಚರಣೆಯಲ್ಲಿ ಮಾತನಾಡಿದರು.

ಸ್ವಾರ್ಥಕ್ಕೆ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳುವ ಮೂಲಕ ಆಗಿನ ಪ್ರಧಾನಿ ಇಂದಿರಾಗಾಂಧಿ ಸರ್ವಾಧಿಕಾರಿ ಧೋರಣೆ ಅನುರಿಸಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದ ಆಶಯಗಳನ್ನು ಮೂಲೆಗೆ ತಳ್ಳಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಿದ್ದನ್ನು ದೇಶದ ಜನತೆ ಮರೆತಿಲ್ಲ ಎಂದರು.

ADVERTISEMENT

ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ವಾಸ ಅನುಭವಿಸಿದ್ದ ಪಕ್ಷದ ಜಿಲ್ಲಾ ಪ್ರಬಂಧಕ ನೀಲಕಂಠಯ್ಯ ಮಾತನಾಡಿ,‘ಯುದ್ಧ ಅಥವಾ ಬೇರೆ ರೀತಿಯಲ್ಲಿ ದೇಶ ಗಂಡಾಂತರಕ್ಕೆ ಸಿಲುಕಿದಾಗ ಮಾತ್ರ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸುವ ಮೂಲಕ ಜನರನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆಯುವುದು ಸಹಜ. ಆದರೆ ತಮ್ಮ ವೈಯಕ್ತಿಕ ಕಾರಣಕ್ಕೆ ದೇಶದ ಜನರ ಮೇಲೆ ಅನಗತ್ಯವಾಗಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಅತ್ಯಂತ ದಮನಕಾರಿ ನೀತಿ ಅನುಸರಿಸಿದರು. ಕೊಪ್ಪಳ ಭಾಗದಲ್ಲಿಯೂ ತುರ್ತು ಪರಿಸ್ಥಿತಿ ವಿರೋಧಿಸಿ ತೀವ್ರಗತಿಯಲ್ಲಿ ಹೋರಾಟ ನಡೆದಿತ್ತು’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರು ಮಾತನಾಡಿ,‘ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸುವಂತೆ ಆಗಿನ ನಾಯಕರು ಹೇಳಿದರು. ಆದರೆ ನಂತರ ಕಾಂಗ್ರೆಸ್‌ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಯಿತು. ಈ ದೇಶಕ್ಕೆ ನೆಹರೂ ಮನೆತನದವರೇ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂಬಂತೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಮಹೇಶ ಮಾತನಾಡಿದರು. ತುರ್ತುಪರಿಸ್ಥಿತಿ ವಿರೋಧಿಸಿ ಮುಖಂಡ ಅಮರೇಗೌಡ ಜಾಲಿಹಾಳ ತಮ್ಮ ಸ್ವರಚಿತ ಕವನ ವಾಚಿಸಿದರು. ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಹಾಗೂ ಇತರರು ಇದ್ದರು. ಚಂದ್ರಕಾಂತ ವಡಗೇರಿ ನಿರೂಪಿಸಿದರು. ತುರ್ತುಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಬಿ.ಕಿಶನರಾವ್ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಸಲಾಯಿತು. ಪಕ್ಷದ ತಾಲ್ಲೂಕು ಮುಖಂಡರು, ಮಹಿಳೆಯರು ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.