ADVERTISEMENT

ಫಸಲು ಕಹಿಯಾದರೂ ಬದುಕು ಸಿಹಿ!

ಹಾಗಲಕಾಯಿ ಬೀಜ ಬೆಳೆದು ಉತ್ತಮ ಆದಾಯ ಗಳಿಸಿದ ಬೆಟಗೇರಿ ಗ್ರಾಮದ ರೈತ

ಪ್ರಮೋದ
Published 8 ಜುಲೈ 2022, 19:30 IST
Last Updated 8 ಜುಲೈ 2022, 19:30 IST
ಮಲ್ಲಪ್ಪ ಗುಡಿಹಿಂದಿನ
ಮಲ್ಲಪ್ಪ ಗುಡಿಹಿಂದಿನ   

ಕೊಪ್ಪಳ: ಐದು ವರ್ಷಗಳ ಹಿಂದೆ ಕೃಷಿ ಕಾಯಕ ಆರಂಭಿಸಿದ ಜಿಲ್ಲೆಯ ಬೆಟಗೇರಿ ಗ್ರಾಮದ ರೈತ ಮಲ್ಲಪ್ಪ ಗುಡಿಹಿಂದಿನ ಈಗ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅವರು ಪಡೆಯುವ ಫಸಲು ’ಕಹಿ‘ಯಾದರೂ, ಈ ಕೆಲಸ ಬದುಕಿಗೆ ’ಸಿಹಿ‘ಯಾಗಿದೆ.

ಹಾಗಲಕಾಯಿ, ಸೌತೇಬೀಜ, ಸೊರೆಕಾಯಿ ಹಾಗೂ ಹಿರೇಕಾಯಿ ಹೀಗೆ ಹಲವು ಬೆಳೆಗಳ ಬೀಜಗಳನ್ನು ಮಲ್ಲಪ್ಪ ಬೆಳೆಯುತ್ತಿದ್ದಾರೆ. ಹಾಗಲಕಾಯಿ ಬೀಜ ಬೆಳೆಯಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಅವರು ಇದಕ್ಕಾಗಿ ಖರ್ಚು ಮಾಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯ ಪಡೆಯುತ್ತಿದ್ದಾರೆ.

ಮಲ್ಲಪ್ಪ ,ಬೆಟಗೇರಿ ಗ್ರಾಮದಲ್ಲಿ ಮುತ್ತೂರು ಮಾರ್ಗದಲ್ಲಿ ಒಂದು ಎಕರೆ ಭೂಮಿ ಹೊಂದಿದ್ದಾರೆ. ಮೊದಲು ಹಮಾಲಿ ಕೆಲಸ ಮಾಡುತ್ತಿದ್ದರು. ಕೃಷಿಯಲ್ಲಿ ತೊಡಗಿದ ಬಳಿ ಬೀಜೋತ್ಪಾದನೆಯಲ್ಲಿ ತೊಡಗಿದ್ದಾರೆ.

ADVERTISEMENT

ಹಾಗಲಕಾಯಿ ಬೀಜವನ್ನು ಒಂದು ಎಕರೆಗೆ 13ರಿಂದ 14 ಕ್ವಿಂಟಲ್‌ ಬೆಳೆಯುತ್ತಿದ್ದಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹36ರಿಂದ ₹38 ಸಾವಿರ ಬೆಲೆಯಿದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆಯಲು ಅಂದಾಜು ₹60ರಿಂದ ₹70 ಸಾವಿರ ಖರ್ಚು ಮಾಡುತ್ತಿದ್ದು, ಎಲ್ಲಾ ವೆಚ್ಚ ತೆಗೆದು ವಾರ್ಷಿಕವಾಗಿ ₹2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಒಂದು ಎಕರೆ ಪ್ರದೇಶದಲ್ಲಿ ಸೌತೇಬೀಜ ಹಾಗೂ ಸೋರೆಕಾಯಿ ಬೀಜ 3ರಿಂದ 4 ಕ್ವಿಂಟಲ್‌, ಹಿರೇಕಾಯಿ ಬೀಜ ಅಂದಾಜು ₹1 ಕ್ವಿಂಟಲ್‌ ಫಸಲು ಪಡೆಯುತ್ತಿದ್ದಾರೆ. ಇದನ್ನು ಅವರು ಕೊಟ್ಟೂರು ಬಳಿಯ ದೂಪದಹಳ್ಳಿಯ ವ್ಯಾಪಾರಿಯೊಬ್ಬರ ಬಳಿ ಮಾರಾಟ ಮಾಡುತ್ತಾರೆ. ಇದರಿಂದಾಗಿ ಬೀಜಗಳ ಮಾರಾಟಕ್ಕೆ ಮಾರುಕಟ್ಟೆಯ ತೊಂದರೆಯೂ ಇಲ್ಲವಾಗಿದೆ.

’ಬೀಜ ಬೆಳೆಯುವುದರಿಂದ ಉತ್ತಮ ಆದಾಯವಿದೆ. ನನಗಿರುವ ಒಂದು ಎಕರೆ ಭೂಮಿಯಲ್ಲಿ ಸದ್ಯಕ್ಕೆ ಹಾಗಲಕಾಯಿ ಬೀಜಗಳನ್ನು ಬೆಳೆಯುತ್ತಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ಫಸಲು ಬರುತ್ತದೆ. ನೀರು ಮತ್ತು ನಿರ್ವಹಣಾ ವೆಚ್ಚ ಕಡಿಮೆ. ನಮ್ಮೂರಿನ ಅಕ್ಕಪಕ್ಕದ ಗ್ರಾಮಗಳ ರೈತರು ಆರಂಭದಲ್ಲಿ ಬೀಜೋತ್ಪಾದನೆಗೆ ಹಿಂದೇಟು ಹಾಕುತ್ತಿದ್ದರು. ಈಗ ನನ್ನ ನೋಡಿ ಕೆಲವರು ಇದೇ ಕಾಯಕ ಆರಂಭಿಸಿದ್ದಾರೆ‘ ಎಂದು ಮಲ್ಲಪ್ಪ ಹೇಳುತ್ತಾರೆ.

‘ದೊಡ್ಡ ಆದಾಯದ ಮೂಲ’

ಕೊಪ್ಪಳ: ‘ವಿವಿಧ ಬೀಜಗಳ ಉತ್ಪಾದನೆ ರೈತರಿಗೆ ದೊಡ್ಡ ಆದಾಯದ ಮೂಲವಾಗಿದೆ. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈ ಕಾರ್ಯ ನಡೆಯುತ್ತಿದೆ‘ ಎಂದುತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದರು.

‘ಕಲ್ಲಂಗಡಿ, ಮೆಣಸಿನಕಾಯಿ, ಬದನೆಕಾಯಿ, ಹಾಗಲಕಾಯಿ, ಹೀರೇಕಾಯಿ ಸೇರಿದಂತೆ ಅನೇಕ ಬೀಜಗಳ ಉತ್ಪಾದನೆ ಪ್ರಮಾಣ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕಡಿಮೆ ಖರ್ಚು ಹೆಚ್ಚು ಲಾಭ ಎನ್ನುವ ಕಾರಣಕ್ಕೆ ಬಹಳಷ್ಟು ರೈತರು ಈ ಕಾಯಕದಲ್ಲಿ ತೊಡಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.