ಕೊಪ್ಪಳ: ತಾಲ್ಲೂಕಿನ ಕುಣಿಕೇರಿ ಗ್ರಾಮದ ರೈತ ರಮೇಶ ಡಂಬ್ರಳ್ಳಿ ಮತ್ತು ಆತನ ಕುಟುಂಬದ ಜಮೀನಿಗೆ ಚರಂಡಿ ನೀರು ಹರಿಸಲಾಗುತ್ತಿದ್ದು, ಇದರಿಂದ ರೋಸಿ ಹೋದ ಅವರು ದಯಾಮರಣಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.
‘ಏಳು ತಿಂಗಳಾದರೂ ಸಮಸ್ಯೆ ಪರಿಹಾರವಾಗಿಲ್ಲ. ಸಮಸ್ಯೆ ಪರಿಹರಿಸುವಂತೆ ಸ್ಥಳೀಯ ಪಿಡಿಒನಿಂದ ಹಿಡಿದು ಜಿಲ್ಲಾ ಪಂಚಾಯಿತಿ ತನಕ ಮೊರೆ ಹೋದರೂ ಸಮಸ್ಯೆ ಪರಿಹಾರವಾಗಿಲ್ಲ. ಹಿಂದೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಫೌಜಿಯಾ ತರುನ್ನಮ್ ಜಮೀನಿಗೆ ಭೇಟಿ ನೀಡಿ, ಪರಿಶೀಲಿಸಿ ಎರಡ್ಮೂರು ತಿಂಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಈಡೇರಿಸಲಿಲ್ಲ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
‘ಗ್ರಾಮದ ನೀರನ್ನು ಚರಂಡಿ ಮೂಲಕ ನಮ್ಮ ಜಮೀನಿಗೆ ಹರಿಸಲಾಗುತ್ತಿದೆ. ಇದರಿಂದ ಜಮೀನು ಮತ್ತು ನಮ್ಮ ಬದುಕು ಎರಡೂ ಹಾಳಾಗುತ್ತಿದೆ. ಬೆಳೆಯಲು ಕೂಡ ಸಾಧ್ಯವಾಗುತ್ತಿಲ್ಲ. ನನಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು; ಇಲ್ಲವಾದರೆ ದಯಾಮರಣಕ್ಕಾದರೂ ಅವಕಾಶ ಕೊಡಬೇಕು’ ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.
‘ಗ್ರಾಮದ ಚರಂಡಿ ನೀರು ರೈತ ರಮೇಶ ಡಂಬ್ರಳ್ಳಿಯ ಜಮೀನಿಗೆ ಹೋಗುತ್ತಿರುವುದು ಗಮನಕ್ಕಿದೆ. ಸಮಸ್ಯೆ ಪರಿಹರಿಸಲು ಮಂಗಳವಾರ ಗ್ರಾಮ ಪಂಚಾಯಿತಿ ಸದಸ್ಯರ ಸಭೆ ಕರೆಯಲಾಗಿದೆ. ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ. ಭದ್ರತೆ ಲಭಿಸಿದರೆ ಮರುದಿನವೇ ಕೆಲಸ ಆರಂಭಿಸುತ್ತೇವೆ’ ಎಂದು ಕುಣಿಕೇರಿ ಗ್ರಾಮದ ಪಿಡಿಒ ಬಸವರಾಜ ಕಿರ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.