ADVERTISEMENT

ಕುಕನೂರು: ರೈತನ ‘ಬದುಕರಳಿಸಿದ’ ಚೆಂಡು ಹೂ

ಕಡಿಮೆ ನೀರಿನಲ್ಲಿ ಬೇಸಾಯ: ಮಾದರಿಯಾದ ಇಟಗಿಯ ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 10:58 IST
Last Updated 11 ನವೆಂಬರ್ 2020, 10:58 IST
ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತ ಹನುಮಂತಪ್ಪ ಅವರ ಹೊಲದಲ್ಲಿ ಬೆಳೆದಿರುವ ಚೆಂಡು ಹೂ
ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದ ರೈತ ಹನುಮಂತಪ್ಪ ಅವರ ಹೊಲದಲ್ಲಿ ಬೆಳೆದಿರುವ ಚೆಂಡು ಹೂ   

ಕುಕನೂರು: ತಾಲ್ಲೂಕಿನ ಇಟಗಿ ಗ್ರಾಮದ ರೈತ ಹನುಮಂತಪ್ಪ ಅವರು ತಮ್ಮ ಜಮೀನಿನಲ್ಲಿ ಯೆಲ್ಲೋ ಗೋಲ್ಡ್ ಮತ್ತು ಕೆಂಪು ಬಣ್ಣದ ತಳಿಯ ಚೆಂಡು ಹೂ ಬೆಳೆದಿದ್ದಾರೆ. ಅದರಿಂದ ಲಾಭ ಗಳಿಸಿದ್ದಾರೆ.

‘ಕೊಳೆವೆಬಾವಿಯಲ್ಲಿ ಕೇವಲ ಒಂದೂವರೆ ಇಂಚಿನಷ್ಟು ನೀರು ಬರುತ್ತಿತ್ತು. ಹಾಗಾಗಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಚೆಂಡು ಹೂವನ್ನು ಪ್ರಯೋಗಾತ್ಮಕವಾಗಿ ಬೆಳೆಯಲು ನಿರ್ಧರಿಸಿದೆ. ಏಪ್ರಿಲ್‌ ತಿಂಗಳಲ್ಲಿ 1200 ಯೆಲ್ಲೋ ಗೋಲ್ಡ್ ಮತ್ತು ಕೆಂಪು ತಳಿಯ 500 ಸಸಿಗಳನ್ನು ನಾಟಿ ಮಾಡಿದೆ’ ಎಂದರು.

ಸಸಿ, ಮೇಲು ಗೊಬ್ಬರ, ಕಳೆ ಹಾಗೂ ಕೂಲಿಗಾಗಿ ₹7 ರಿಂದ ₹8 ಸಾವಿರ ಖರ್ಚು ಮಾಡಿದ್ದೆ. ಕೊಪ್ಪಳ, ಹೊಸಪೇಟೆ ಹಾಗೂ ಗದಗ ಮಾರುಕಟ್ಟೆಗಳಿಗೆ ಮಾರಾಟ ಮಾಡಿದೆ. ಜುಲೈ ತಿಂಗಳವರೆಗೆ ಒಟ್ಟು ₹35000 ಹಣ ಗಳಿಸಿದೆ. ₹25 ಸಾವಿರ ಲಾಭ ಬಂದಿತು ಎಂದು ರೈತ ಹನುಮಂತಪ್ಪ ತಿಳಿಸಿದರು.

ADVERTISEMENT

‘ಆಗಸ್ಟ್ ತಿಂಗಳಲ್ಲಿ ಹಳದಿ ಬಣ್ಣದ ಹಾಗೂ ಕೆಂಪು ಬಣ್ಣದ ಚೆಂಡು ಹೂವಿನ ಸಸಿ ತಂದು ನಾಟಿ ಮಾಡಿದ್ದೇನೆ. ಬೆಳೆ ಉತ್ತಮವಾಗಿ ಬಂದಿದೆ. ಆದರೆ, ಕಳೆದ 10 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಬೆಳೆದು ನಿಂತಿದ್ದ ಗಿಡಗಳು ನೆಲಕ್ಕುರುಳಿವೆ. ಮಳೆಯಿಂದಾಗಿ ಸುಮಾರು 2 ಕ್ವಿಂಟಲ್‌ನಷ್ಟು ಹೂ ಹಾಳಾಗಿದೆ’ ಎಂದರು.

‘ನಾಲ್ಕು ಕ್ವಿಂಟಲ್ ಹೂವುಗಳನ್ನು ಕೊಯ್ಲು ಮಾಡಲಾಗಿದೆ. ಇದರಲ್ಲಿ 80 ಕೆ.ಜಿಯನ್ನು ಗದಗ ಮಾರುಕಟ್ಟೆಗೆ ₹80ಕ್ಕೆ ಕೆಜಿಯಂತೆ ಹಾಗೂ ಎರಡೂವರೆ ಕ್ವಿಂಟಲ್‌ ಅನ್ನು ಕೊಪ್ಪಳ ನಗರದ ಹೂವು ಮಾರಾಟಗಾರರಿಗೆ ಕೆಜಿಗೆ ₹50 ರಂತೆ ಮಾರಾಟ ಮಾಡಿದ್ದೇನೆ’ ಎಂದು ಹೇಳಿದರು.

ಇನ್ನೂ ಒಂದೂವರೆ ತಿಂಗಳು ಹೂ ಕೀಳಬಹುದು. ಅಂದಾಜು 10 ಕ್ವಿಂಟಲ್‌ನಷ್ಟು ಹೂವಿನ ಇಳುವರಿ ಬರುವ ನಿರೀಕ್ಷೆ ಇದೆ. ಉತ್ತಮ ಬೆಲೆ ಸಿಕ್ಕಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂಬ ನಿರೀಕ್ಷೆ ಇದೆ ಎಂದು ‘ಪ್ರಜಾವಾಣಿ’ಯೊಂದಿಗೆ ಅವರು ಹೂವಿನ ಕೃಷಿ ಕುರಿತು ಸಂತಸ ಹಂಚಿಕೊಂಡರು.

ಕಡಿಮೆ ಪ್ರಮಾಣದ ನೀರಿನಲ್ಲಿ ಉತ್ತಮ ಲಾಭ ಗಳಿಸಬಹುದಾಗಿದೆ. ಹೂವಿನ ಕೃಷಿ ಮಾಡಲು ಇಚ್ಛಿಸುವ ರೈತರು ಸಮಯಕ್ಕೆ ತಕ್ಕಂತೆ ಸಸಿ ನಾಟಿ ಮಾಡಿದಲ್ಲಿ, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ, ಹೆಚ್ಚಿನ ಲಾಭ ಗಳಿಸಬಹುದು ಎಂದು ರೈತ ಹನುಮಂತಪ್ಪ ಅವರು ಹೂವಿನ ಕೃಷಿ ಮಾಡುವವರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.