ADVERTISEMENT

ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 14:17 IST
Last Updated 29 ಫೆಬ್ರುವರಿ 2020, 14:17 IST
ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು
ಸ್ಥಳೀಯ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು   

ಗಂಗಾವತಿ: ‘ಅವಧಿಗೂ ಮುನ್ನ ಭತ್ತ ತೆನೆ ಹೊಡೆದಿದ್ದರಿಂದ ತಾಲ್ಲೂಕಿನ ರೈತರು ಆಂತಕಕ್ಕೆ ಒಳಗಾಗಿದ್ದಾರೆ. ಪರಿಶೀಲನೆ ನಡೆಸುವಂತೆ ಕೃಷಿ ವಿಜ್ಞಾನಿಗಳಿಗೆ ಸೂಚಿಸಲಾಗಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಸಚಿವರಾದ ಬಿ.ಸಿ.ಪಾಟೀಲ್‌ ಹಾಗೂ ಆನಂದ ಸಿಂಗ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಪ್ರಕೃತಿಯನ್ನು ನಾವು ಕಡೆಗಣಿಸುತ್ತಿದ್ದೇವೆ. ರೈತರು ಜಮೀನುಗಳಲ್ಲಿ ಗಿಡಮರಗಳನ್ನು ಬೆಳೆಸುವ ಕೆಲಸ ಮಾಡಬೇಕು. ಆಗ ತನ್ನಷ್ಟಕ್ಕೆ ತಾನೇ ಮಳೆ-ಬೆಳೆ ಆಗಲಿದೆ. ರೈತರು ಯಾರ ಮೇಲೂ ಅವಲಂಬನೆ ಆಗುವ ಅನಿವಾರ್ಯತೆ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.

ADVERTISEMENT

ಗಂಗಾವತಿಯಲ್ಲಿ ಕೃಷಿ ಕಾಲೇಜು ಆರಂಭಿಸಲು ಶಾಸಕರು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಆರಂಭಿಸಲಾಗುವುದು. ಕೃಷಿ ಸಚಿವನಾಗಿರುವುದಕ್ಕೆ ಹೆಮ್ಮೆ ಇದೆ. ರಾಜ್ಯದ 70 ಜನರನ್ನು ಪ್ರತಿನಿಧಿಸುತ್ತಿದ್ದೇನೆ. ರೈತರ ಬದುಕು ಮುಳ್ಳಿನ ಹಾಸಿಗೆ ಇದ್ದಂತೆ, ಪ್ರಾಮಾಣಿಕವಾಗಿ ನಾನು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಅರಣ್ಯ ಸಚಿವ ಆನಂದ ಸಿಂಗ್‌ ಮಾತನಾಡಿ,‘ಇಡೀ ಜಗತ್ತು ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಅವಿಷ್ಕಾರಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಮಾಜ ಕಟ್ಟುವ ದೃಷ್ಠಿಗಿಂತ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವತ್ತ ಸಾಗಿರುವುದು ದುರದುಷ್ಟಕರ ಸಂಗತಿ’ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಬೆಳೆಸುವ ಯೋಜನೆ ಹಾಕಿಕೊಂಡಿದ್ದೇವೆ. ಯಾವ ತರಹದ ಮರಗಳನ್ನು ಬೆಳಸಬೇಕು ಎಂಬುದನ್ನು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಉತ್ತರ ಕರ್ನಾಟಕ ಭಾಗದಲ್ಲಿ ಕಾಡನ್ನು ಬೆಳಸುವ ಕಾರ್ಯ ಆಗಲಿದೆ ಎಂದು ಹೇಳಿದರು.

ನಂತರ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಇಬ್ಬರು ಸಚಿವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಗಂಗಾವತಿಯಲ್ಲಿ ಕೃಷಿ ಕಾಲೇಜು ಪ್ರಾರಂಭಿಸಬೇಕು. ಆನೆಗೊಂದಿ ಭಾಗದಲ್ಲಿ 30 ವರ್ಷಗಳಿಂದ ವಾಸ ಮಾಡುತ್ತಿರುವ ಅಲ್ಲಿನ ನಿವಾಸಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಹಕ್ಕು ಪತ್ರ ವಿತರಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಸಚಿವರಿಗೆ ಮನವಿ ಸಲ್ಲಿಸಿದರು.

ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಪ್ರಮುಖರಾದ ಹನುಮನಗೌಡ, ಎಚ್.ಗಿರೇಗೌಡ, ತಿಪ್ಪೇರುದ್ರಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ಬಸವನಗೌಡ ಪಾಟೀಲ, ಸಣ್ಣಕ್ಕಿ ನೀಲಪ್ಪ, ಸಂತೋಷ, ಹನುಮಂತಪ್ಪ ನಾಯಕ, ಚನ್ನಪ್ಪ ಮಳಿಗಿ, ಶ್ರೀಧರ, ದೇವಪ್ಪ ಕಾಮದೊಡ್ಡಿ ಹಾಗೂ ಕಾಶಿನಾಥ ಚಿತ್ರಗಾರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.