ADVERTISEMENT

ಮಳೆಗೆ ಮೊರೆ ಇಡುತ್ತಿರುವ ರೈತರು

ತೇವಾಂಶ ಕೊರತೆಯಿಂದ ಬಾಡುತ್ತಿರುವ ಹೆಸರು ಬೆಳೆ; ತಲೆಕೆಳಗಾದ ರೈತರ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 26 ಮೇ 2020, 2:15 IST
Last Updated 26 ಮೇ 2020, 2:15 IST
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದ ಭಾಗದಲ್ಲಿ ಬಿತ್ತನೆಯಾಗಿರುವ ಹೆಸರು
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದ ಭಾಗದಲ್ಲಿ ಬಿತ್ತನೆಯಾಗಿರುವ ಹೆಸರು   

ಹನುಮಸಾಗರ: ಅಕಾಲಿಕ ಮಳೆಗೆ ಹೆಸರು ಬೀಜ ಬಿತ್ತನೆ ಮಾಡಿದ ರೈತರು ಸದ್ಯ ಮಳೆಗಾಗಿ ಮೊರೆ ಇಡುತ್ತಿದ್ದಾರೆ.

ಎರಡು ವಾರದ ಹಿಂದೆ ಬಿತ್ತನೆ ಮಾಡಲಾಗಿದ್ದು, ಸದ್ಯ ಬೀಜ ಮೊಳಕೆಯೊಡೆದು ಮೇಲೆದ್ದಿದೆ. ಆದರೆ, ತೇವಾಂಶದ ಕೊರತೆಯಿಂದ ಬಾಡುವ ಹಂತದಲ್ಲಿದೆ.

ಹೆಸರು ಬೀಜ ಬಿತ್ತನೆಗೆ ರೈತರು ಅವಸರ ಮಾಡಬಾರದು, ಮುಂದೆ ಮಳೆಯಾಗದಿದ್ದರೆ ತೊಂದರೆ ಎದುರಾಗುತ್ತದೆ. ಈ ಕಾರಣದಿಂದ ರೋಹಿಣಿ ಮಳೆಗೆ ಮುಂಗಾರು ಬಿತ್ತನೆ ಮಾಡಬೇಕು ಎಂದು ಕೃಷಿ ಇಲಾಖೆ ಸೂಚನೆ ನೀಡಿತ್ತು.

ADVERTISEMENT

ಆದರೆ ಅವಧಿಗಿಂತ ಮೊದಲೇ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ಬೆಳೆಯ ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ಮಾಡುವುದರ ಮೂಲಕ ಎರಡನೇ ಬೆಳೆ ಪಡೆಯಬಹುದು ಎಂಬುದು ರೈತರ ಲೆಕ್ಕಾಚಾರವಾಗಿತ್ತು.

ಬಿತ್ತನೆಗೆ ಅಗತ್ಯವಿದ್ದಷ್ಟು ಹಸಿಯಾಗಿದ್ದಕ್ಕೆ ರೈತರು ಒಳ್ಳೆ ಅವಕಾಶ ಎಂದೇ ಭಾವಿಸಿ ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ ಎರಡು ಎಲೆಯಾಗಿದೆ.

‘ಬಿತ್ತನೆಯಾದ ಬಳಿಕ ಒಂದು ಬಾರಿಯೂ ಮಳೆಯಾಗಿಲ್ಲ. ಬಿಸಿಲಿನ ತಾಪ ಹೆಚ್ಚುತ್ತಿದೆ. ಮೋಡವಾಗುತ್ತಿದೆಯಾದರೂ ಮಳೆಯ ಸುಳಿವಿಲ್ಲದಿರುವುದು ನಮ್ಮನ್ನು ಚಿಂತೆಗೀಡು ಮಾಡಿದೆ’ ಎಂದು ಗಡಚಿಂತಿ ಗ್ರಾಮದ ರೈತ ಯಲ್ಲಪ್ಪ ಅಬ್ಬಿಗೇರಿ ಹೇಳಿದರು.

ಕೊರೊನಾ ಹಾವಳಿಯ ಈ ದಿನಗಳಲ್ಲಿ ರೈತರು ಸಾಕಷ್ಟು ತೊಂದರೆ ಎದುರಿಸಿ ಬೀಜ, ಗೊಬ್ಬರ, ಬಿತ್ತನೆಯ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ. ಈ ಸಮಯದಲ್ಲಿ ಮಳೆಯಾಗದಿದ್ದರೆ ತೀವ್ರ ತೊಂದರೆ ಎದುರಾಗುತ್ತದೆ ಎಂದು ರೈತ ಮುಖಂಡ ಯಮನೂರಪ್ಪ ಅಬ್ಬಿಗೇರಿ ಹೇಳಿದರು.

ಈ ಮಧ್ಯೆ ಬೆಳೆಯನ್ನು ತಿನ್ನಲು ನವಿಲುಗಳ ಹಾವಳಿ ಹೆಚ್ಚಾಗಿದ್ದು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಗುಂಪಾಗಿ ಬರುವ ನವಿಲುಗಳು ಇಡೀ ಬೆಳೆ ತಿಂದು ಹೋಗುತ್ತಿರುವುದು ಮತ್ತೊಂದು ಚಿಂತೆಗೆ ಕಾರಣವಾಗಿದೆ ಎಂದು ರೈತರಾದ ಶಿವಪ್ಪ ಪಾಟೀಲ, ಹನುಮಗೌಡ ಗೌಡ್ರ, ಶಿವಣ್ಣ ಹನುಮಸಾಗರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.