ADVERTISEMENT

ಕೊಪ್ಪಳ: ‘ಸ್ವಾತಂತ್ರ್ಯ ಚಳವಳಿ ಸ್ಫೂತಿಯಾಗಲಿ’

ಕ್ವಿಟ್ ಇಂಡಿಯಾ ಚಳವಳಿ 79ನೇ ವರ್ಷಾಚರಣೆ: ಆನ್‌ಲೈನ್ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 4:00 IST
Last Updated 10 ಆಗಸ್ಟ್ 2021, 4:00 IST
ಕೊಪ್ಪಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಂಡಾಚಾರ್.ವಿ. ಪುರೋಹಿತ್ ಅವರನ್ನು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸನ್ಮಾನಿಸಿದರು
ಕೊಪ್ಪಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಂಡಾಚಾರ್.ವಿ. ಪುರೋಹಿತ್ ಅವರನ್ನು ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸನ್ಮಾನಿಸಿದರು   

ಕೊಪ್ಪಳ: ‘ದೇಶದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ನಡವಳಿಕೆಯಲ್ಲಿ ಬದಲಾವಣೆ ಉಂಟಾಗಬೇಕು. ಸ್ವಾತಂತ್ರ್ಯ ಹೋರಾಟಗಾರರ ದೇಶಾಭಿಮಾನ ಯುವಕರಲ್ಲಿ ಮೂಡಬೇಕು’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿ 79ನೇ ವರ್ಷಾಚರಣೆ ಹಾಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತಸೋಮವಾರ ನಡೆದ ಸರಣಿ ಚಟುವಟಿಕೆಗಳಿಗೆ ಆನ್‌ಲೈನ್‌ ಮೂಲಕ ಚಾಲನೆ ನೀಡಿ ಉಪನ್ಯಾಸ ನೀಡಿದರು.

ಅನೇಕರ ಹೋರಾಟದ ಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ದೇಶಾಭಿಮಾನ, ದೇಶದ ಒಳಿತಿನ ಬಗ್ಗೆ, ಅಭಿವೃದ್ಧಿಯ ಬಗ್ಗೆ, ದೇಶದ ಸಂಪತ್ತನ್ನು ದೇಶದಲ್ಲಿಯೇ ಉಳಿಸುವ ಬಗ್ಗೆ ಅವರಿಗಿದ್ದ ಅಪಾರ ಶ್ರದ್ಧೆ, ಆಸಕ್ತಿಯನ್ನು, ಆದರ್ಶ, ತತ್ವಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ನಮ್ಮ ದೇಶ ಸ್ವತಂತ್ರವಾಗಿದ್ದು, ಅಭಿವೃದ್ಧಿ ಕಡೆ ಸಾಗುತ್ತಿದೆ. ಯುವಕರು ಅದಕ್ಕೆ ಪೂರಕವಾಗಿ ತಮ್ಮ ಜೀವನಶೈಲಿ ಬದಲಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ದೇಶದ ಏಕತೆ, ಘನತೆಯನ್ನು ಕಾಪಾಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ADVERTISEMENT

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರಭುರಾಜ್ ನಾಯಕ ಮಾತನಾಡಿ,‘1940 ರ ದಶಕದಲ್ಲಿ ಭಾರತ ಅಹಿಂಸಾ ಮಾರ್ಗದಿಂದ ಹೋರಾಡಿ ಸ್ವತಂತ್ರವಾಯಿತು’ ಎಂದು ಹೇಳಿದರು.

‘ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವವನ್ನು ಹಲವರು ವಿರೋಧಿಸಿ, ಕ್ರಾಂತಿಕಾರಕ ಮಾರ್ಗದಲ್ಲಿ ಹೋರಾಟವನ್ನು ಆರಂಭಿಸಿದರು’ ಎಂದರು.

ಪ್ರಸ್ತುತ ದೇಶದಲ್ಲಿರುವ ಅಭಿವೃದ್ಧಿಗೆ ವಿರೋಧವಾದ ಸಂಗತಿಗಳಾದ ಬಡತನ, ಅಸಮಾನತೆ, ನಿರುದ್ಯೋಗ, ಅನಾರೋಗ್ಯ, ಭಯೋತ್ಪಾದನೆ ಮುಂತಾದ ವಿಷಯಗಳಿಗೆ ಕ್ವಿಟ್ ಇಂಡಿಯಾ ಎಂದು ಹೇಳಬೇಕಿದೆ. ಆರ್ಥಿಕ, ಸಾಮಾಜಿಕ, ಬೌದ್ಧಿಕ, ರಾಜಕೀಯ ಅಸಮಾನತೆ ಹೋಗಲಾಡಿಸಬೇಕಿದೆ. ಅರಿಸ್ಟಾಟಲ್ ಹೇಳುವಂತೆ ಸಂಪತ್ತಿನ ವಿಕೇಂದ್ರೀಕರಣದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಮತ್ತು ಸಮಾನತೆ ಸಾಧ್ಯ ಎಂದರು.

ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಮಾತನಾಡಿ, ಆ.25 ರೊಳಗೆ ಪ್ರಬಂಧಗಳನ್ನು ಬರೆದು ಅಪ್‌ಲೋಡ್ ಮಾಡಬೇಕು. ಚಿತ್ರ ಬಿಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಆ. 30 ರೊಳಗೆ ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕುಎಂದರು. ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ,ಪಿಯು ಉಪನಿರ್ದೇಶಕ ಜಿ.ಎಂ.ಭೂಸನೂರಮಠ, ಎನ್‌ಐಸಿ ಅಧಿಕಾರಿಗಳಾದ ಈರಣ್ಣ,ಬಸವರಾಜ ಸೇರಿದಂತೆ ಆನ್‌ಲೈನ್ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.