ಕೊಪ್ಪಳ: ‘ವ್ಯಕ್ತಿಯು ತಾನು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ’ ಎಂದು ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ನಗರದ ಮೇಘರಾಜ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ಹುದ್ದೆಯಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವುದು ಮುಖ್ಯವಲ್ಲ. ಆ ಹುದ್ದೆಯಲ್ಲಿ ಇದ್ದಾಗ ಮಾಡಿದ ಕಾರ್ಯಗಳು ಮಾತ್ರ ಸದಾ ನೆನಪಿನಲ್ಲಿ ಉಳಿಯುತ್ತವೆ. ಸಂಘ ಅತ್ಯಂತ ಬೃಹತ್ ಸಂಘಟನೆಯಾಗಿದೆ. ದೇಶದಲ್ಲಿ ಮಾದರಿಯಾದ ಸಂಘಟನೆಯಾಗಿದೆ. ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕಾದರೆ ಸಂಘದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದರು.
ನಾಗರಾಜ ಆರ್ ಜುಮ್ಮಣ್ಣನ್ನವರ ಮಾತನಾಡಿ,‘ನನ್ನ ಸೇವೆಯನ್ನು ಪರಿಗಣಿಸಿ ರಾಜ್ಯ ಅಧ್ಯಕ್ಷರು ಹುದ್ದೆ ನೀಡಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಸನ್ಮಾನದಿಂದ ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ. ಕೇವಲ ಜಿಲ್ಲೆಯ ನೌಕರರ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿದ್ದ ವ್ಯಾಪ್ತಿ ರಾಜ್ಯಕ್ಕೆ ವಿಸ್ತಾರವಾಗಿದೆ’ ಎಂದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ ಮಾತನಾಡಿದರು.
ಅಂಗವಿಕಲನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೀರಪ್ಪ ಅಂಡಗಿ, ಶಂಕರಗೌಡ ಮಾಲಿಪಾಟೀಲ, ಮುಸ್ತಾಪ ಕುದರಿಮೊತಿ, ಸುಶೀಲೇಂದ್ರ ದೇಶಪಾಂಡೆ, ಶ್ರೀನಿವಾಸ,ವೈ.ಜಿ.ಪಾಟೀಲ, ಸರ್ದಾರ ಅಲಿ, ವೆಂಕಟ ಮಧಸೂದನ್ ಹಾಗೂ ಅಣ್ಣಪ್ಪ ಹಳ್ಳಿ ಇದ್ದರು.
ಸುರೇಶ ಮೊರಗೇರಿ ನಿರೂಪಿಸಿದರು. ಹನುಮಂತಪ್ಪ ಕುರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.