ADVERTISEMENT

ಪರೀಕ್ಷಾ ಶುಲ್ಕ ವಿನಾಯಿತಿಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:16 IST
Last Updated 2 ಜೂನ್ 2020, 12:16 IST
ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಮಂಗಳವಾರ ಎಸ್.ಎಫ್.ಐ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ಸದಸ್ಯರು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು
ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಮಂಗಳವಾರ ಎಸ್.ಎಫ್.ಐ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ಸದಸ್ಯರು ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು   

ಗಂಗಾವತಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಸರ್ಕಾರದ ಆದೇಶ ಹಾಗೂ ವಿವಿಯ ಸುತ್ತೋಲೆಯನ್ನು ಗಾಳಿಗೆ ತೂರಿ ಪ್ರಾಚಾರ್ಯರು 2ಬಿ ವರ್ಗದ ವಿದ್ಯಾರ್ಥಿಗಳಿಂದ ಪೂರ್ಣ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಮಂಗಳವಾರ ಎಸ್‌ಎಫ್‌ಐ ಹಾಗೂ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿದ್ಯಾರ್ಥಿ ಸಂಘಟನೆಗಳು ನಗರದ ಎಸ್‌.ಕೆ.ಎನ್‌.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದವು.

ಈ ವೇಳೆ ಎಸ್‌ಎಫ್‌ಐನ ತಾಲ್ಲೂಕು ಅಧ್ಯಕ್ಷ ಗ್ಯಾನೇಶ್‌ ಕಡಗದ್‌ ಮಾತನಾಡಿ, ಬಳ್ಳಾರಿ ವಿವಿಯ ವ್ಯಾಪ್ತಿಯ ಕೆಲ ಸರ್ಕಾರಿ ಕಾಲೇಜುಗಳಲ್ಲಿ 2ಬಿ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡದೇ ಪ್ರಾಚಾರ್ಯರು ಪೂರ್ಣ ಪ್ರಮಾಣದ ಶುಲ್ಕವನ್ನು ಕಟ್ಟಲು ಆದೇಶ ಮಾಡಿದ್ದಾರೆ.

ಕೊವೀಡ್‌ ಹಿನ್ನೆಲೆಯಲ್ಲಿ ಸರ್ಕಾರವು ಎಸ್‌.ಸಿ /ಎಸ್‌.ಟಿ, ಒಬಿಸಿ ವಿದ್ಯಾರ್ಥಿಗಳಿಗೆ‌ ಪರೀಕ್ಷಾ ಶುಲ್ಕ ಕಟ್ಟಲು ವಿನಾಯಿತಿ ನೀಡಿದೆ. ಆದರೆ, ಕಾಲೇಜಿನ ಪ್ರಾಂಶುಪಾಲರು ಸರ್ವಾಧಿಕಾರಿತನ ತೋರಿಸಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಸರ್ಕಾರದ ಸುತ್ತೋಲೆ ಪ್ರಕಾರ 2ಬಿ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕು. ಪೂರ್ಣ ಹಣ ಕಟ್ಟಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ನಂತರ ವಿದ್ಯಾರ್ಥಿಗಳ ಸಂಘಟನೆಗಳ ಒತ್ತಾಯಕ್ಕೆ ಮಣಿದ ಪ್ರಾಚಾರ್ಯರು 2ಬಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಹೇಳಿದರು. ಬಳಿಕ ಪ್ರತಿಭಟನೆಯನ್ನು ಪ್ರತಿಭಟನೆಯನ್ನು ವಾಪಸ್ಸು ಪಡೆದರು.

ಈ ವೇಳೆ ಸಂಘಟನೆಯ ಪ್ರಮುಖರಾದ ಬಾಳಪ್ಪ, ಅಮರೇಶ, ಚಾಂದ್ ಸಲ್ಮಾನ್, ಸರ್ಫರಾಜ, ಸೈಯದ್ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.