ADVERTISEMENT

ಕೊಪ್ಪಳ | ಮಾರ್ಚ್‌ ಬಳಿಕ ಎನ್‌ಪಿಎಸ್‌ ರದ್ದತಿಗೆ ಹೋರಾಟ: ಷಡಾಕ್ಷರಿ

ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಷಡಾಕ್ಷರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 5:55 IST
Last Updated 22 ನವೆಂಬರ್ 2022, 5:55 IST
ಕೊಪ್ಪಳದಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 2021–22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು
ಕೊಪ್ಪಳದಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 2021–22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು   

ಕೊಪ್ಪಳ: ‘ಈಗ 7ನೇ ವೇತನ ಆಯೋಗ ರಚನೆಯಾಗಿದ್ದು ಮಾರ್ಚ್‌ ವೇಳೆಗೆ ಅನುಷ್ಠಾನಗೊಳ್ಳಲಿದೆ. ಬಳಿಕ ಎನ್‌ಪಿಎಸ್‌ ರದ್ದುಗೊಳಿಸಲು ಹೋರಾಟ ಆರಂಭಿಸಲಾಗುವುದು. ಅಲ್ಲಿನ ತನಕ ಎನ್‌ಪಿಎಸ್‌ ನೌಕರರು ತಾಳ್ಮೆಯಿಂದ ಕಾಯಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ C ಮನವಿ ಮಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, 2021–22ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೋರಾಟದಲ್ಲಿ ಯಶಸ್ಸು ಕಾಣಬೇಕಾದರೆ ಆಂತರಿಕ ಸಮಸ್ಯೆಗಳನ್ನು ಬದಿಗಿಟ್ಟು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಎನ್‌ಪಿಎಸ್ ರದ್ದು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಇದಕ್ಕಾಗಿ ಕೇಂದ್ರದಲ್ಲಿ ಮಸೂದೆ ಮಂಡನೆಯಾಗಬೇಕು. ಸಂಪೂರ್ಣವಾಗಿ ವಿಷಯ ತಿಳಿದುಕೊಳ್ಳದೇ ವಿನಾಕಾರಣ ಅಪಪ್ರಚಾರ ಮಾಡಬಾರದು. ಒಪಿಎಸ್‌ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾರ್ಚ್‌ ಬಳಿಕ ಹೋರಾಟ ಮಾಡೋಣ’ ಎಂದರು.

‘ಮಾರ್ಚ್‌ ಒಳಗೆ ಸರ್ಕಾರಿ ಆದೇಶ ಹೊರಡಿಸಿ, ಏಳನೇ ವೇತನ ಆಯೋಗ ಜಾರಿ ಮಾಡಿಸಿಕೊಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಪುಣ್ಯಕೋಟಿ ಯೋಜನೆಗೆ ಪ್ರತಿಯೊಬ್ಬ ನೌಕರರನೂ ₹400 ಕೊಡಬೇಕು. ನಾವು ಸರ್ಕಾರದ ಈ ಯೋಜನೆಗೆ ನೆರವು ಮಾಡಿಕೊಟ್ಟರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಬಲ ಬರಲಿದೆ’ ಎಂದು ಹೇಳಿದರು.

ADVERTISEMENT

‘ಸಂಘ ನೌಕರರು ಹಾಗೂ ಸರ್ಕಾರದ ಸೇತುವೆಯಾಗಿ ಕೆಲಸ ಮಾಡುತ್ತದೆ. ವಿನಾಕಾರಣ ದೂಷಿಸುವ ಬದಲು ಆಲದ ಮರದಂತೆ ಬೆಳೆದ ಈ ಸಂಘದ ಬಗ್ಗೆ ಗೌರವದ ಭಾವನೆ ಬೆಳೆಸಿಕೊಳ್ಳಬೇಕು. ನೌಕರರ ಸಂಘದ ಮಕ್ಕಳಿಗೆ ಕೆಎಎಸ್‌ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಂಘದಿಂದಲೇ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ಅದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಂಜಿನಿಯರಿಂಗ್‌, ಮೆಡಿಕಲ್‌ ಮತ್ತು ಎಂಡಿಯಂಥ ಉನ್ನತ ಶಿಕ್ಷಣ ಪಡೆಯಲು ಸಂಘದ ಸದಸ್ಯರ ಮಕ್ಕಳಿಗೆ ಶೇ. 10ರಷ್ಟು ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಮಾಲಿಪಾಟೀಲ್‌, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ರುದ್ರಪ್ಪ ಎಂ.ವಿ., ಕಾರ್ಯದರ್ಶಿ ಸದಾನಂದ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ, ರಾಜ್ಯ ಜಂಟಿ ಕಾರ್ಯದರ್ಶಿ ಎಸ್‌.ಎಸ್‌. ಸುಂಕದ, ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣೇಗೌಡ ಪೊ. ಪಾಟೀಲ್‌, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಡಿಡಿಪಿಐ ಮುತ್ತುರೆಡ್ಡಿ ರಡ್ಡೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನೂತನ ಪಿಂಚಣಿ ಯೋಜನೆ ರದ್ದು ಮಾಡಿಸುವುದೇ ಸರ್ಕಾರಿ ನೌಕರರ ಸಂಘದ ಮುಂದಿರುವ ದೊಡ್ಡ ಗುರಿ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು.
- ನಾಗರಾಜ ಆರ್‌. ಜುಮ್ಮನ್ನವರ,ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ

ಸರ್ಕಾರಿ ನೌಕರರು ಸರ್ಕಾರ ಹಾಗೂ ಸಮಾಜದ ಭಾಗವಿದ್ದಂತೆ. ನಿಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವೆ.
- ಹೇಮಲತಾ ನಾಯಕ, ವಿಧಾನ ಪರಿಷತ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.