ADVERTISEMENT

‘ಧರ್ಮಕ್ಕಾಗಿ ಹೊಡೆದಾಡಿ ಸಾವು ಆತಂಕಕಾರಿ’

ಶಿವಯ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವದಲ್ಲಿ ಮಾತೆ ಬಸವೇಶ್ವರಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 7:03 IST
Last Updated 22 ಜನವರಿ 2023, 7:03 IST
ಯಲಬುರ್ಗಾ ತಾಲ್ಲೂಕು ಮರಕಟ್ಟ ಗ್ರಾಮದಲ್ಲಿ ಶುಕ್ರವಾರ ಶಿವಯ್ಯ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತನಾಡಿದರು
ಯಲಬುರ್ಗಾ ತಾಲ್ಲೂಕು ಮರಕಟ್ಟ ಗ್ರಾಮದಲ್ಲಿ ಶುಕ್ರವಾರ ಶಿವಯ್ಯ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಮಾತನಾಡಿದರು   

ಯಲಬುರ್ಗಾ: ದೇಶದಲ್ಲಿ ಜಾತಿ, ಧರ್ಮ, ದೇವರು ಹೆಸರಿನಲ್ಲಿ ಹೊಡೆದಾಡಿಕೊಂಡು ಮೃತರಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ಸಂಗತಿಯಾಗಿದೆ. ಜಾತಿ ಎನ್ನುವುದು ದೇಶ ನಾಶ ಮಾಡುವ ಒಂದು ಪಿಡುಗಾಗಿದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ವಿಷಾದಿಸಿದರು.

ಮರಕಟ್ಟ ಗ್ರಾಮದಲ್ಲಿ ಶುಕ್ರವಾರ ಶಿವಯ್ಯ ಸ್ವಾಮೀಜಿ ಅವರ 8ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ 99ನೇ ಮಾಸಿಕ ಶಿವಾನುಭವ ಕಾರ್ಯಕ್ರಮ, ಗ್ರಾಮದ ಬಸವಕೇಂದ್ರ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಣಿಗಳಂತೆ ವಾಸಿಸುತ್ತಿದ್ದ ಮನುಷ್ಯ, ಮೊದಲು ಯಾವುದೇ ಜಾತಿಯನ್ನು ಮಾಡಿಕೊಂಡಿರಲಿಲ್ಲ. ತಿಳುವಳಿಕೆ ಬಂದಾಗಲೆಲ್ಲಾ ವಿವಿಧ ಧಾರ್ಮಿಕ ಪದ್ಧತಿ, ಮೂಢನಂಬಿಕೆ, ಜಾತಿ ಎಂದು ಸೃಷ್ಟಿಸಿಕೊಂಡು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಾಜೇಶ ಸಸಿಮಠ ಮಾತನಾಡಿ, ಮಾದರಿ ವ್ಯಕ್ತಿಯ ವ್ಯಕ್ತಿತ್ವವನ್ನು ನಾವೇಲ್ಲರೂ ಅನುಸರಿಸುವ ಮೂಲಕ ಸುಂದರ ಸಮಾಜವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಿದೆ. ಶರಣ ತತ್ವವು ಎಲ್ಲರೂ ಸಮಾನರು ಎಂದು ಹೇಳುತ್ತದೆ. ಶರಣರನ್ನು ಸ್ಮರಿಸುವ ನಾವುಗಳು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿ ಶಂಕ್ರಪ್ಪ ಅಂಗಡಿ, ಬಸವಾದಿ ಶರಣರ ವಚನಗಳನ್ನು ಮತ್ತು ಆರೂಢರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಪುಟ್ಟ ಮರಕಟ್ಟ ಗ್ರಾಮದ ಶಿವಾನಂದ ಮಠದಲ್ಲಿ ನಿರಂತರವಾಗಿ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹನುಮಗೌಡ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ವಿರುಪಾಕ್ಷಯ್ಯ ಸ್ವಾಮೀಜಿ ಕಲ್ಲಭಾವಿ, ಶರಣಪ್ಪ ಗುಂಗಾಡಿ, ಬಸವರಾಜ ಇಂಗಳದಾಳ, ಅಮರೇಶಪ್ಪ ಕೋಡಿಹಳ್ಳಿ, ಶರಣಪ್ಪ ಹಸಬಿ, ಬಸವರಾಜಪ್ಪ ತುರ್ವಿಹಾಳ, ಮಾದೇವಪ್ಪ ಚನ್ನಳ್ಳಿ, ಅಮರೇಶ ಬಳ್ಳಾರಿ ‌ಇದ್ದರು.

–––––––––––––––

ಎರಡನೇ ಮಹಾಯುದ್ಧದಲ್ಲಿ ಸತ್ತ ಜನರಿಗಿಂತ ದೇಶದಲ್ಲಿ ಹೆಚ್ಚಿನ ಜನರು ಜಾತಿ, ಧರ್ಮ, ದೇವರ ಹೆಸರಿನಲ್ಲಿ ಹೊಡೆದಾಡಿ ಸತ್ತಿದ್ದಾರೆ. ಮಾತೆ ಬಸವೇಶ್ವರಿ, ಅತ್ತಿವೇರಿ ಬಸವಧಾಮ ಪೀಠಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.