ADVERTISEMENT

ಪ್ಲಾಸ್ಟಿಕ್‌ ಧ್ವಜ ಮಾರಿದರೆ ದಂಡ: ತಹಶೀಲ್ದಾರ್

ಸ್ವಾತಂತ್ರ್ಯೋತ್ಸವ ಸಭೆಗೆ ಅಧಿಕಾರಿಗಳ ಗೈರು, ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 7:38 IST
Last Updated 9 ಆಗಸ್ಟ್ 2023, 7:38 IST
ಕುಷ್ಟಗಿಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತೆ ಸಭೆಯಲ್ಲಿ ತಹಶೀಲ್ದಾರ್ ಶೃತಿ ಮಲ್ಲಪ್ಪಗೌಡ್ರ ಇತರರು ಇದ್ದರು
ಕುಷ್ಟಗಿಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತೆ ಸಭೆಯಲ್ಲಿ ತಹಶೀಲ್ದಾರ್ ಶೃತಿ ಮಲ್ಲಪ್ಪಗೌಡ್ರ ಇತರರು ಇದ್ದರು   

ಕುಷ್ಟಗಿ: ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ತರುವ ಮತ್ತು ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಧ್ವಜಗಳನ್ನು ಸಾರ್ವಜನಿಕರು ಬಳಕೆ ಮಾಡಬಾರದು. ಈ ವಿಷಯದಲ್ಲಿ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ತಹಶೀಲ್ದಾರ್‌ ಶೃತಿ ಮಲ್ಲಪ್ಪಗೌಡ್ರ ಹೇಳಿದರು.

ಮಂಗಳವಾರ ಇಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೂರ್ವಸಿದ್ಧತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ಲಾಸ್ಟಿಕ್‌ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟವನ್ನು ಈಗಾಗಲೇ ನಿಷೇಧಿಸಲಾಗಿದೆ. ಒಂದೊಮ್ಮೆ ವ್ಯಾಪಾರಿಗಳು ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯುವ ರಾಷ್ಟ್ರಧ್ವಜಾರೋಹಣ ನಂತರದ ಕಾರ್ಯಕ್ರಮಗಳಲ್ಲಿ ಪಟ್ಟಣದ ಎಲ್ಲ ಇಲಾಖೆ ಅಧಿಕಾರಿಗಳು ಸ್ವತಃ ಪಾಲ್ಗೊಂಡಿರಬೇಕು. ಮಕ್ಕಳು, ಸಾರ್ವಜನಿಕರಿಗೆ ಅಗತ್ಯ ಆಸನ ವ್ಯವಸ್ಥೆ, ಸ್ವಚ್ಛತೆ, ಕುಡಿಯುವ ನೀರು ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ADVERTISEMENT

ಮನೆಯಲ್ಲಿನ ವಯೋವೃದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವುದು, ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಅಲ್ಲದೆ ಪೊಲೀಸ್‌, ಗೃಹರಕ್ಷಕ, ಸೇವಾದಳ, ಸ್ಕೌಟ್ಸ್‌ ದಳಗಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಭೆ ನಿರ್ಧರಿಸಿತು. ಪಟ್ಟಣದಲ್ಲಿ ಸ್ವಚ್ಛತೆ ಕೈಗೊಳ್ಳಲು ಪುರಸಭೆಗೆ ಸೂಚಿಸಲಾಯಿತು.

ಗೈರು; ಗರಂ

ಇಲ್ಲಿಯ ತಹಶೀಲ್ದಾರರಾಗಿ ಹೊಸದಾಗಿ ಬಂದ ನಂತರ ನಡೆದ ಮೊದಲ ಸಭೆಯಲ್ಲಿ ಬಹುತೇಕ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಗೆ ಶೃತಿ ಗರಂ ಆದ ಪ್ರಸಂಗ ನಡೆಯಿತು. ಬೆರಳೆಣಿಕೆ ಸಿಬ್ಬಂದಿ ಕಂಡು ಸಿಡಿಮಿಡಿಗೊಂಡ ಅವರು, ಮೊದಲಿನಿಂದಲೂ ಇದೇ ಪರಂಪರೆ ಇದೆಯೆ ಎಂದು ಅಸಮಾಧಾನಗೊಂಡು ಕಂದಾಯ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಿದರು. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.