ADVERTISEMENT

ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಿರಿ

ನರೇಗಾ: ಸಾರ್ವಜನಿಕರಿಗೆ ಇದ್ದೂರಲ್ಲೇ ದುಡಿಮೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 14:01 IST
Last Updated 12 ಅಕ್ಟೋಬರ್ 2021, 14:01 IST
ಗಂಗಾವತಿ ತಾಲ್ಲೂಕಿನ ಸೂರ್ಯನಾಯಕನ ತಾಂಡಾ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಮಂಗಳವಾರ ಶಾಸಕ ಪರಣ್ಣ ಮುನವಳ್ಳಿ ಮೀನಿನ ಮರಿಗಳನ್ನು ಬಿಡುವ ಮೂಲಕ ಚಾಲನೆ ನೀಡಿದರು
ಗಂಗಾವತಿ ತಾಲ್ಲೂಕಿನ ಸೂರ್ಯನಾಯಕನ ತಾಂಡಾ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಮಂಗಳವಾರ ಶಾಸಕ ಪರಣ್ಣ ಮುನವಳ್ಳಿ ಮೀನಿನ ಮರಿಗಳನ್ನು ಬಿಡುವ ಮೂಲಕ ಚಾಲನೆ ನೀಡಿದರು   

ಗಂಗಾವತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಸ್ವಂತ ಊರಿನಲ್ಲೆ ದುಡಿಯಲು ಅವಕಾಶವಿದ್ದು, ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲ್ಲೂಕಿನ ಬಸಾಪಟ್ಟಣ ಗ್ರಾ.ಪಂ ವ್ಯಾಪ್ತಿಯ ಸೂರ್ಯನಾಯಕನ ತಾಂಡಾದಲ್ಲಿ ಮಂಗಳವಾರ ಎನ್.ಆರ್.ಎಲ್.ಎಂ (ಸಂಜೀವಿನಿ) ವತಿಯಿಂದನರೇಗಾ ಅಡಿ ಅಭಿವೃದ್ಧಿ ಪಡಿಸಿದ ಕೆರೆಯಲ್ಲಿ ಮೀನು ಸಾಕಾಣಿಗೆ ಮಾಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಂಗಾವತಿ ನಗರದ ಕೂಗಳತೆ ದೂರದಲ್ಲಿರುವ ಸೂರ್ಯನಾಯಕನ ತಾಂಡಾ ಕೆರೆಯು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೆರೆಯಲ್ಲಿ ನೀರು ತುಂಬಿರುವುದರಿಂದ ಕೆರೆಯ ಸೌಂದರ್ಯವು ಹೆಚ್ಚಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವುದು ಖುಷಿಯ ವಿಷಯ ಎಂದರು.

ADVERTISEMENT

ಇದೀಗ, ಎನ್.ಆರ್.ಎಲ್.ಎಂ (ಸಂಜೀವಿನಿ) ಮಿಷನ್ 35 ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ನಿರ್ಧರಿಸಿದ್ದು, ಇಂದು 20 ಸಾವಿರ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿದೆ. ಇದರ ಸಾಕಾಣಿಗೆ ಜವಾಬ್ದಾರಿಯನ್ನು, ಸ್ವಸಹಾಯ ಸಂಘದ ಸದಸ್ಯರುಗಳಿಗೆ ವಹಿಸಿದ್ದು, ಮೀನು ಸಾಕಾಣಿಕೆ ಮೂಲಕ ಅವರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದರು.

ನಂತರ ತಾ.ಪಂ ಕಾರ್ಯನಿರ್ವಾಹಕ ಡಾ.ಡಿ.ಮೋಹನ್ ಮಾತನಾಡಿ, ಕಳೆದ ತಿಂಗಳು ಮಹಿಳಾ ಕಾಯಕೋತ್ಸವ ಅಭಿಯಾನ ಹಾಗೂ ನರೇಗಾದಡಿ ಕೂಲಿಕಾರರು ಕೆರೆಯ ಹೂಳನ್ನು ತೆಗೆದಿದ್ದರಿಂದ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದ ಇದೀಗ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಅವಕಾಶ ನೀಡಿದ್ದು, ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಈ ವೇಳೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ ಬಿ.ಪಾಟೀಲ, ಬಸಾಪಟ್ಟಣ ಪಿಡಿಒ ಇಂದಿರಾ, ಸದಸ್ಯರಾದ ಗೌರಮ್ಮ, ಶಂಕರ ನಾಯಕ, ಕನಕರಾಜ ನಾಯಕ, ಸಂಜೀವಿನಿ ಸಿಬ್ಬಂದಿ ಮಲ್ಲಿಕಾರ್ಜುನ, ಪ್ರಮುಖರಾದ ರಾಘವೇಂದ್ರ, ಹುಲಿಗೆಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.