ADVERTISEMENT

ಕನಕಗಿರಿ: ಹುಳ ಬಿದ್ದ ಆಹಾರ ಸೇವನೆ-12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 8:36 IST
Last Updated 22 ನವೆಂಬರ್ 2022, 8:36 IST
   

ಕನಕಗಿರಿ (ಕೊಪ್ಪಳ ಜಿಲ್ಲೆ): ಕನಕಗಿರಿಯ ಪರಿಶಿಷ್ಟ ಜಾತಿ ಕಾಲೊನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವಿಸಿದ್ದರಿಂದ ಮಂಗಳವಾರ ಅಸ್ವಸ್ಥರಾಗಿದ್ದಾರೆ. ಅವರನ್ನು ಸಮುದಾಯ ಆರೋಗ್ರ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕನಕಗಿರಿ ಪಟ್ಟಣದ ವಿವಿಧ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಹನುಮಂತಿ, ದೀಪಿಕಾ, ಪಾರ್ವತಿ, ಶ್ರಾವಣಿ, ದೀಪಾ, ಆಶ್ವಿನಿ, ಲತಾ, ದೀಪಾ ಲಕ್ಷ್ಮಣ, ನಿರ್ಮಲಾ, ದೀಪಾ ಶರಣಪ್ಪ, ಸವಿತಾ, ಪವಿತ್ರಾ ಸೇರಿದಂತೆ ಹಲವರು ಆಸ್ಪತ್ರಗೆ ದಾಖಲಾದವರು.

ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು, ವಾಂತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ತಮ್ಮ ಕಾರು ಹಾಗೂ ಆಟೊಗಳಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ‘ಸೋಮವಾರ ಅವಲಕ್ಕಿ ಒಗ್ಗರಣೆ, ಅನ್ನ, ಸಾಂಬಾರು ಸೇವಿಸಿದ ಬಳಿಕ ಆರೋಗ್ಯದಲ್ಲಿ ಸಮಸ್ಯೆಯಾಗಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ADVERTISEMENT

ವಿದ್ಯಾರ್ಥಿ ನಿಲಯದಲ್ಲಿನ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು, ಎಸ್‌ಎಫ್‌ಐ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಕಂದಕೂರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ ಸೋಮವಾರ ಸಭೆ ನಡೆಸಿ ಅಡುಗೆದಾರರಿಗೆ ಎಚ್ಚರಿಕೆ ನೀಡಿದ ದಿನವೇ ಈ ಘಟನೆ ನಡೆದಿದೆ.

ಅಡುಗೆ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ, ದವಸ ಧಾನ್ಯಗಳನ್ನು ಸ್ವಚ್ಛಗೊಳಿಸುವುದಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ ಅಡುಗೆದಾರರನ್ನು ಬದಲಾಯಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶೇಷಪ್ಪ ಪೂಜಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಸೈಯದ್ ಸುಭಾನ್, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಹಾಗೂ ಪಾಲಕರು ದೂರಿದರು.

‘ವಿದ್ಯಾರ್ಥಿಗಳು ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ’ ಎಂದು ಚಿಕಿತ್ಸೆ ನೀಡಿದ ವೈದ್ಯ ಪವನಕುಮಾರ ಅರವಟಗಿಮಠ ತಿಳಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಿದಾನಂದ, ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಆದರ್ಶ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕನಕರೆಡ್ಡಿ ಕೆರಿ, ಮುಖ್ಯಶಿಕ್ಷಕ ಶಿವಕುಮಾರ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.