ADVERTISEMENT

ಕಣ್ಣೆದುರೇ ಕೊಚ್ಚಿ ಹೋದರೂ ರಕ್ಷಿಸಲಾಗಲಿಲ್ಲ: ಕಲ್ಲನಗೌಡ ನೋವಿನ ನುಡಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 12:49 IST
Last Updated 2 ಅಕ್ಟೋಬರ್ 2022, 12:49 IST
ಸಂಬಂಧಿಕರ ಆಕ್ರಂದನ
ಸಂಬಂಧಿಕರ ಆಕ್ರಂದನ   

ಯಲಬುರ್ಗಾ: ‘ಹಳ್ಳದಲ್ಲಿ ಸಿಲುಕಿ ಮರದಿಂದ ರಕ್ಷಣೆ ಪಡೆದು ಕಾಪಾಡಿ, ಕಾಪಾಡಿ ಎಂದು ಕಣ್ಣ ಮುಂದೆಯೇ ಗೋಗೆರೆಯುವುದು ಕಾಣುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತನ ಕಾಡುತ್ತಿತ್ತು. ಏನೆಲ್ಲಾ ಪ್ರಯತ್ನಪಟ್ಟರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ...‘

ಇದು ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟ ಮಹಿಳೆಯರ ಸಂಬಂಧಿ ಕಲ್ಲನಗೌಡ ಮಾಲಿಪಾಟೀಲ ಅವರ ನೋವಿನ ನುಡಿ.

ತಾಲ್ಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಹಳ್ಳದಾಟುವ ಸಂದರ್ಭದಲ್ಲಿ ಕೊಚ್ಚಿಹೋಗಿದ್ದ ನಾಲ್ವರನ್ನು ಕಳೆದುಕೊಂಡು ಅವರು ರೋಧಿಸುತ್ತಿದ್ದರು. ನಾಲ್ವರಲ್ಲಿ ಇಬ್ಬರು ‘ಮರವೊಂದನ್ನು ಹಿಡಿದುಕೊಂಡು ಕೂಗುತ್ತಿದ್ದರು’ ಎಂದರು. ಸುತ್ತಲಿದ್ದ ಗ್ರಾಮಸ್ಥರ ಕಣ್ಣುಗಳು ತೇವಗೊಂಡವು.

ADVERTISEMENT

ಘಟನಾ ಸ್ಥಳಕ್ಕೆ ಬಂದ ಮೃತ ವ್ಯಕ್ತಿಗಳ ಸಂಬಂಧಿಗಳ ರೋಧನ ಮುಗಿಲು ಮುಟ್ಟಿತ್ತು. ‘ಚಂದಾಗಿ ಬಾಳ್ವಿಮಾಡಿಕೊಂಡು ಹೊಂಟಿದ್ದ ತುಂಬಿದ ಮನ್ಯಾಗ ಈಗ ಕತ್ಲಾತು. ಯಾರ ಜೋತೆನೂ ಅಲ್ಲ ಅಂತ ಅನ್ಸೊಕೊಂಡಿರಲಿಲ್ಲ, ತಮ್ಮ ಮನೆ ಬದುಕು ಬಾಳ್ವಿ ಅಂತ ಮಾಡಿಕೊಂಡು ಹೋಗುತ್ತಿದ್ರು, ಇವರಿಗೆ ಹೀಗ ಆಗಬಾರದಿತ್ತು’ ಎಂದು ಸಂಬಂಧಿಯೊಬ್ಬಳು ಜೋರಾಗಿ ಅಳುತ್ತಿರುವುದನ್ನು ನೋಡಿ ಅನೇಕರು ದುಃಖಿಸಿದರು.

‘ಶನಿವಾರ ಬೆಳಿಗ್ಗೆ ಎಲ್ಲರೊಂದಿಗೆ ಎಂದಿನಂತೆ ನಕ್ಕು ನಲಿದಾಡಿ ಕೆಲಸಕ್ಕಾಗಿ ಹೋದವರು ಜೀವಂತವಾಗಿ ವಾಪಸ್ ಬರಲಿಲ್ಲ. ಸಂಬಂಧಿಕರ ಕುಟುಂಬಗಳಲ್ಲಿನ ನಾಲ್ಕು ಜನ ಹೆಣ್ಣುಮಕ್ಕಳನ್ನು ಕಳೆದುಕೊಂಡಿದ್ದು ಕುಟುಂಬಕ್ಕೆ ಭಾರಿ ಆಘಾತವಾಗಿದೆ. ಎಲ್ಲರೂ ಮಧ್ಯಮ ವಯಸ್ಸಿನವರಾಗಿದ್ದು ಮೃತರು ತಮ್ಮ ತಮ್ಮ ಕುಟುಂಬದೊಂದಿಗೆ ಅಚ್ಚುಕಟ್ಟಾಗಿ ಬದುಕುಕಟ್ಟಿಕೊಳ್ಳುವ ಹೊತ್ತಿನಲ್ಲಿ ಆಘಾತ ಎದುರಾಗಿದೆ’ ಎಂದು ಗ್ರಾಮಸ್ಥರು ಕಂಬನಿ ಮಿಡಿದರು. ಮೃತ ವ್ಯಕ್ತಿಗಳ ಕುಟುಂಬಸ್ಥರನ್ನು ಸಮಾಧಾನ ಪಡಿಸಲು ಸಂಬಂಧಿಕರು ಹಾಗೂ ಕುಟುಂಬಸ್ಥರು ಹೈರಾಣಾದರು. ನಾಲ್ಕೂ ಜನರ ಅಂತ್ಯಕ್ರಿಯೆ ನಡೆಯಿತು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಸಂಸದ ಸಂಗಣ್ಣ ಕರಡಿ, ಮುಖಂಡ ನವೀನ ಗುಳಗಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ತಹಶೀಲ್ದಾರ್ ಶ್ರೀಶೈಲ ತಳವಾರ ಸೇರಿದಂತೆ ಅನೇಕರು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.