ಗಂಗಾವತಿ: ‘ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವ್ಯವಸ್ಥೆ ಪ್ರಬಲಗೊಳಿಸಲು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಸದಾ ವಿನೂತನ ಪ್ರಯತ್ನ ನಡೆಸುತ್ತಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ಎರಡು ವರ್ಷಗಳ ವಸತಿಯುತ ಪಿಯುಸಿ ಕೋರ್ಸ್‌ಗೆ ಉಚಿತ ಪ್ರವೇಶ ನೀಡಲಾಗುವುದು’ ಎಂದು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.
ಪಿಯುಸಿ ಫಲಿತಾಂಶದ ಕುರಿತು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ರಾಜ್ಯಪಠ್ಯಕ್ರಮ, ಆಂಗ್ಲ ಮಾಧ್ಯಮದ ಸಿಬಿಎಸ್ಇ, ಐಸಿಎಸ್ಇ ಪಠ್ಯದ ವಿಭಾಗದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಆಯ್ಕೆಮಾಡಿಕೊಂಡು ಎರಡು ವರ್ಷ ವಸತಿ ಜತೆಗೆ ಉಚಿತ ಶಿಕ್ಷಣ ಪಡೆಯಬಹುದು. ಒಂದು ತಾಲ್ಲೂಕಿಗೆ ಮೂವರಂತೆ 100 ಮಂದಿಗೆ ಉಚಿತ ಪ್ರವೇಶದ ಅವಕಾಶ ನೀಡಲಾಗುವುದು. ಪ್ರಥಮ ಸ್ಥಾನ ಪಡೆದ ಬಗ್ಗೆ ವಿದ್ಯಾರ್ಥಿಗಳು ಬಿಇಒ ಕಚೇರಿಯಿಂದ ಪತ್ರ ತಂದು ಕಾಲೇಜಿಗೆ ನೀಡಿದರೆ ಪ್ರವೇಶಾತಿ ನೀಡಲಾಗುತ್ತದೆ ಎಂದು ವಿವರಿಸಿದರು.
ಅತ್ಯುತ್ತಮ ಫಲಿತಾಂಶ: ಈ ವರ್ಷವು ಸಹ ವಿದ್ಯಾನಿಕೇತನ ಪಿಯು ಕಾಲೇಜಿನ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಫಲಿತಾಂಶ ಅತ್ಯುತ್ತಮವಾಗಿ ಬಂದಿದ್ದು, ಜಿಲ್ಲೆಯ ಬಹುತೇಕ ಟಾಪರ್‌ಗಳು ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿಗಳೇ ಆಗಿರುವುದು ಖುಷಿಯ ಸಂಗತಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಕಾಲೇಜಿನ ಒಟ್ಟು ಫಲಿತಾಂಶ ಶೇ 98.85ರಷ್ಟು ಬಂದಿದೆ. ವಿಜ್ಞಾನ ವಿಭಾಗದಿಂದ ಈ ಬಾರಿ 1,504 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 1,488 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 25 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇನ್ನೂ ವಾಣಿಜ್ಯ ವಿಭಾಗದಿಂದ 106 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 92 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವಡ್ಡರಹಟ್ಟಿಯಲ್ಲಿ ಐಸಿಎಸ್ಇ ಶಾಲೆ ಆರಂಭ: ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಮತ್ತೊಂದು ವಿನೂತನ ಪ್ರಯತ್ನದ ಭಾಗವಾಗಿ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಒಳಗೊಂಡ ಶಿಕ್ಷಣ ಒದಗಿಸಲು ವಡ್ಡರಹಟ್ಟಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಾದರಿಯ ಐಸಿಎಸ್ಇ ಪಠ್ಯಕ್ರಮದ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ನೆಕ್ಕಂಟಿ ಸೂರಿಬಾಬು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಬೇಬಿ ಕ್ಲಾಸ್‌ನಿಂದ 8ನೇ ತರಗತಿವರೆಗೆ ಜೂನ್ ತಿಂಗಳಲ್ಲಿ ಪ್ರವೇಶಾತಿಗಳು ಆರಂಭವಾಗಲಿದ್ದು, ಆಸಕ್ತ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಬಹುದು. ಇಲ್ಲಿ ಮುಂದುವರಿದ ತಂತ್ರಜ್ಞಾನ ಶಿಕ್ಷಣ ದೊರೆಯಲಿದೆ. ಜತೆಗೆ ಸುಸಜ್ಜಿತ ಬಾಲಕರ, ಬಾಲಕಿಯರ ವಸತಿ ನಿಲಯ ಜತೆಗೆ ಲ್ಯಾಬ್, ಗ್ರಂಥಾಲಯಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಈ ವೇಳೆ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಆದರ್ಶ್ ನೆಕ್ಕಂಟಿ, ಮಲ್ಲಿಕಾರ್ಜುನ, ಜಗನ್, ಉಮಾಶಂಕರ್, ಚಂದ್ರಶೇಖರ, ನಳಿನಿ, ಕೃಷ್ಣಪ್ರಸಾದ್, ಅಭಿಷೇಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.