
ಕೊಪ್ಪಳ: ‘ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಪಂಪ್‌ಸೆಟ್‌ಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲು ಜಾರಿಯಲ್ಲಿದ್ದ ಅಕ್ರಮ ಸಕ್ರಮ ರದ್ದು ಮಾಡಿ ಶೀಘ್ರ ಸಂಪರ್ಕ ಯೋಜನೆ ಜಾರಿ ಮಾಡಲಾಗಿದೆ’ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಜೆಸ್ಕಾಂ ಸಹಯೋಗದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಇಂಧನ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ‘ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್ ಸೇರಿದಂತೆ ಇತರೆ ಯಾವುದೇ ಕೆಲಸ ಮಾಡುವಾಗ ಆಯಾಭಾಗದ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಕೆಳಹಂತದ ಅಧಿಕಾರಿಗಳಿಗೆ ಸಮಸ್ಯೆಗಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.
‘ರೈತರ ಅನುಕೂಲಕ್ಕೆ ರಾಜ್ಯದಲ್ಲಿ ಅಕ್ರಮ ಸಕ್ರಮ ಯೋಜನೆ ಜಾರಿಯಲ್ಲಿತ್ತು. 2023ರಲ್ಲಿ ಯೋಜನೆ ರದ್ದು ಮಾಡಲಾಗಿದೆ. ಪಂಪ್‌ಸೆಟ್‌ಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆದಿದ್ದರೆ ಐಪಿ ಮೂರು ತಿಂಗಳು ಸಮಯ ನೀಡಿ ತೆರವು ಮಾಡಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ವಿದ್ಯುತ್ ವಿತರಣಾ ಘಟಕ, ಸೋಲಾರ ಪ್ಲಾಂಟ್ ಅಳವಡಿಕೆಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಯಿತು.
'ಕೈಗಾರಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸಬೇಕು. ಅಧಿಕ ಲೋಡ್‌ನಿಂದಾಗಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್‌ಗಳನ್ನು ಸ್ಥಾಪಿಸುವ ಮೂಲಕ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ವಿದ್ಯುತ್ ಪೂರೈಸಬೇಕು‘ ಎಂದು ನಿರ್ದೇಶನ ನೀಡಿದರು.
ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಶೀಘ್ರ ಸಂಪರ್ಕ ಯೋಜನೆಗೆ ಜೆಸ್ಕಾಂ ₹15 ಸಾವಿರ ಶುಲ್ಕ ನಿಗದಿ ಮಾಡಿದ್ದು, ಇದರಿಂದ ರೈತರಿಗೆ ಹೊರೆಯಾಗಲಿದೆ. ಟಿಸಿ ಅಗತ್ಯ ಇಲ್ಲದ ರೈತರಿಗೆ ಶುಲ್ಕ ಕಡಿಮೆ ಮಾಡಬೇಕು’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವರು ‘ಅಧಿಕಾರಿಗಳು ಆದಷ್ಟು ಬೇಗ ಶುಲ್ಕ ನಿಗದಿ ಮಾಡಬೇಕು. ಇದಕ್ಕೆ ಹೆಚ್ಚು ಪ್ರಚಾರ ನೀಡಬೇಕು’ ಎಂದರು.
ಶಾಸಕ ಬಸವರಾಜ ರಾಯರಡ್ಡಿ, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಭಾಜಪೇಯಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.