
ಕುಷ್ಟಗಿ: ‘ನದಿ, ಕೆರೆ ಸೇರಿದಂತೆ ಎಲ್ಲ ಜಲಮೂಲಗಳನ್ನು ಸಂರಕ್ಷಿಸುವುದರ ಜೊತೆಗೆ ಕಲುಷಿತಗೊಳ್ಳದಂತೆ ನೋಡಿಕೊಳ್ಳುವಲ್ಲಿ ಈಗ ನಾವು ತಪ್ಪು ಮಾಡುತ್ತಲೇ ಹೋದರೆ ಮುಂದಿನ ಪೀಳಿಗೆಗೆ ಉಳಿಗಾಗಲವೇ ಇಲ್ಲ’ ಎಂದು ಜಲಜಾಗೃತಿಯಲ್ಲಿ ತೊಡಗಿರುವ ಉತ್ತರ ಪ್ರದೇಶ ಮೂಲದ ರಾಬಿನ್‌ಸಿಂಗ್ ಹೇಳಿದರು.
ಜಲಮೂಲಗಳ ರಕ್ಷಣೆ ಮತ್ತು ಅವು ಮಲಿನವಾಗದಂತೆ ನೋಡಿಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಗಂಗಾನದಿಯ ಉಗಮ ಸ್ಥಾನವಾಗಿರುವ ಗಂಗೋತ್ರಿಯಿಂದ ಇತರರೊಂದಿಗೆ ಪಾದಯಾತ್ರೆಯ ಮೂಲಕ ರಾಮೇಶ್ವರದವರೆಗೆ ಜನಜಾಗೃತಿ ಅಭಿಯಾನ ಕೈಗೊಂಡಿರುವ ಅವರು ಪಟ್ಟಣದಲ್ಲಿ ಶುಕ್ರವಾರ ಆರಾಳಗೌಡ್ರ ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ನೀರಿನ ಬಗ್ಗೆ ಅರಿವಿನ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಕಾರ್ಖಾನೆಗಳ ತ್ಯಾಜ್ಯ, ಮಲಮೂತ್ರ ಸಹಿತ ಚರಂಡಿ ಕೊಳೆ ಸಹಿತ ವಿವಿಧ ರೀತಿಯ ಮಾಲಿನ್ಯ ನದಿಗಳನ್ನು ಸೇರುತ್ತಿದೆ. ಅಂಥ ನೀರನ್ನೇ ಶುದ್ಧೀಕರಣದ ಹೆಸರಿನಲ್ಲಿ ನಮ್ಮ ಮನೆ ಮನೆಗೆ ನಲ್ಲಿ ಮೂಲಕ ತಲುಪಿಸಲಾಗುತ್ತಿದೆ. ಆ ನೀರು ಕುಡಿಯುವುದರಿಂದ ನೂರಕ್ಕೂ ಅಧಿಕ ಕಾಯಿಲೆಗಳು ಬಾಧಿಸುತ್ತಿವೆ. ಇದು ನಮಗೆ ತಿಳಿಯುತ್ತಿಲ್ಲವಲ್ಲ’ ಎಂದು ಖೇದ ವ್ಯಕ್ತಪಡಿಸಿದರು.
‘ಈಗಲಾದರೂ ಜನರು ಎಚ್ಚೆತ್ತುಕೊಳ್ಳಬೇಕು. ಸಾಧ್ಯವಾದಷ್ಟು ಜಲಮೂಲಗಳನ್ನು ಮಲಿನ ಮುಕ್ತಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳು ನಡೆಯಬೇಕು. ನೀರನ್ನು ಮಿತವಾಗಿ ಬಳಸಲು ಜನರನ್ನು ಪ್ರೇರೇಪಿಸಬೇಕು. ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ನೀರಿನ ವಿಷಯದಲ್ಲಿ ಕಳಕಳಿ ಹೊಂದುವ ಮೂಲಕ ಮುಂದಿನ ತಲೆಮಾರುಗಳವರೆಗೂ ಶುದ್ಧ ನೀರನ್ನು ಉಳಿಸಿ ಹೋಗೋಣ ಎಂದೇ ಸಂಕಲ್ಪಿಸಬೇಕು. ಜಲಸಂರಕ್ಷಣೆಗೆ ಕೈಜೋಡಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಶಿವಕುಮಾರ ಆರಾಳಗೌಡ್ರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ನಂತರ ವೀರೇಶ ಬಂಗಾರಶೆಟ್ಟರ ನಿವಾಸದ ಬಳಿ ಪರಿಸರ ಕಾಳಜಿಯುಳ್ಳ ಪಟ್ಟಣದ ಸಮಾನ ಮನಸ್ಕರೊಂದಿಗೆ ನಡೆದ ಸಮಾಲೋಚನೆ ಸಭೆಯಲ್ಲಿ ಜಲಸಂರಕ್ಷಣೆ, ಮಾಲಿನ್ಯಗೊಳಿಸುವ ಸಂಬಂಧ ಅನುಸರಿಸಬೇಕಿರುವ ಕ್ರಮಗಳು ಹಾಗೂ ಸದ್ಯ ನೀರಿನ ವಿಷಯದಲ್ಲಿನ ನಿರ್ಲಕ್ಷ್ಯದ ಕುರಿತು ಅಭಿಪ್ರಾಯ ಹಂಚಿಕೊಂಡರು.
ರಾಬಿನ್ ಸಿಂಗ್ ಅವರೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡಿರುವ ರಾಮ್‌ಧೀರ್‌ಸಿಂಗ್, ನರೇಂದ್ರಸಿಂಗ್, ಪರಿಸರ ಪ್ರೇಮಿಗಳಾದ ವೀರೇಶ ಬಂಗಾರಶೆಟ್ಟರ, ಪಾಂಡುರಂಗ ಆಶ್ರಿತ್, ಕೃಷ್ಣ ಕಂದಕೂರು, ಬಾಬು ಘೋರ್ಪಡೆ, ಮಹೇಶ ಹಡಪದ, ಮಂಜುನಾಥ ಮಹಾಲಿಂಗಪುರ, ಬಸವರಾಜ ಪಾಟೀಲ, ಸೋಹನ್‌ಸಿಂಗ್ ಹಾಗೂ ಇತರರು ಇದ್ದರು.
ನ.11ರಿಂದ ಉತ್ತರ ಪ್ರದೇಶದಿಂದ ಕೈಗೊಂಡಿರುವ ರಾಬಿನ್‌ಸಿಂಗ್, ಮತ್ತವರ ತಂಡದವರ ಪಾದಯಾತ್ರೆ ಅಭಿಯಾನ ಫೆ.28ಕ್ಕೆ ರಾಮೇಶ್ವರ ತಲುಪಲಿದ್ದು, ರಾಮಲಿಂಗೇಶ್ವನಿಗೆ ಗಂಗಾಜಲದಿಂದ ಅಭಿಷೇಕ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.