ಕುಷ್ಟಗಿ: ಗ್ರಾಹಕರು, ಕ್ಷಣಮಾತ್ರದಲ್ಲಿ ಬೂದಿಯಾಗುವ ಪಟಾಕಿಗಳಿಗೆ ಹೇಳಿದಷ್ಟು ಬೆಲೆಗೆ ಹಣಕೊಟ್ಟು ತರುತ್ತಾರೆ. ಗಣಪತಿ ಹಬ್ಬದ ಅಲಂಕಾರಕ್ಕೆ ಹಣ ಖರ್ಚು ಮಾಡುತ್ತಾರೆ. ಆದರೆ ಗಣೇಶ ಮೂರ್ತಿ ಖರೀದಿಸುವುದಕ್ಕೆ ಚೌಕಾಸಿ ಮಾಡುತ್ತಾರೆ... ಇವು ಕಳೆದ ನಾಲ್ಕು ದಶಕಗಳಿಮದ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿರುವ ಪಟ್ಟಣದ ಹಳೆ ಬಜಾರದ ರುಕ್ಮಿಣಿ ಚಿತ್ರಗಾರ, ಜ್ಯೋತಿ ಚಿತ್ರಗಾರ ಅವರ ಮಾತುಗಳು.
ಗಣಪತಿ ಮೂರ್ತಿ ತಯಾರಿಸಲು ಅಗತ್ಯ ಪರಿಕರಗಳ ಖರೀದಿ, ಶ್ರಮ ಮತ್ತು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾರಾಟ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆ, ಏಳು–ಬೀಳುಗಳನ್ನು ಕುರಿತು ಜ್ಯೋತಿ ಚಿತ್ರಗಾರ ಶುಕ್ರವಾರ ಸಮಸ್ಯೆ ವಿವರಿಸಿದರು.
‘ಪರಿಸರ ಸ್ನೇಹಿ ಪ್ರತಿಮೆಗಳ ಬಗ್ಗೆ ಜನರಲ್ಲಿ ಆಸಕ್ತಿಯಿಲ್ಲ. ಎಲ್ಲರೂ ಬಣ್ಣದ ಮೂರ್ತಿಗಳನ್ನು ಇಷ್ಟಪಡುತ್ತಾರೆ. ಬೇರೆ ಊರುಗಳಿಂದ ತರುವ ಸಣ್ಣ ದೊಡ್ಡ ಗಾತ್ರದ ಪಿಒಪಿ ಪ್ರತಿಮೆಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.
‘ಭಕ್ತರ ಭಾವನೆಗಳಗೆ ಧಕ್ಕೆ ಬಾರದ ರೀತಿಯಲ್ಲಿ ಸುಂದರ ಕಲಾಕೃತಿಗಳೊಂದಿಗೆ ಗಣೇಶ ಮೂರ್ತಿಗಳನ್ನು ತಯಾರಿಸಬೇಕು. ಈ ಪ್ರಕ್ರಿಯೆ ಆರೇಳು ತಿಂಗಳು ಮೊದಲೇ ಆರಂಭಗೊಂಡಿರುತ್ತದೆ. ಈ ಭಾಗದಲ್ಲಿ ದೊರೆಯದ ವಿಶೇಷ ಮಣ್ಣನ್ನು ಕಿನ್ನಾಳ, ಹೊಸಪೇಟೆ ಕಡೆಯಿಂದ ಖರೀದಿಸಿ ತರಬೇಕು. ಮನೆಯಲ್ಲಿರುವ ನಾಲ್ವರಿಗೂ ಇದೇ ಕೆಲಸ. ಬೇರೆ ಉದ್ಯೋಗ ಗೊತ್ತಿಲ್ಲ. ಹೊಟ್ಟೆ ಹೊರೆಯುವುದಕ್ಕೂ ಮೂರ್ತಿ ತಯಾರಿಕೆಯೇ ಅನಿವಾರ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಗಣೇಶ ಮೂರ್ತಿಗಳ ಮಾರಾಟ ಒಂದು ರೀತಿಯಲ್ಲಿ ತರಕಾರಿ ವ್ಯಾಪಾರದಂತಾಗಿದ್ದು, ಸ್ಥಳೀಯವಾಗಿ ಮತ್ತು ಪಾರಂಪರಿಕವಾಗಿ ಈ ವೃತ್ತಿಯನ್ನು ಅವಲಂಬಿಸಿರುವವರಿಗೆ ನಷ್ಟವಾಗುತ್ತಿದೆ’ ಎಂದರು.
ಗಣೇಶ ಮೂರ್ತಿ ತಯಾರಿಕೆಗೆ ಆಯಿಲ್‌ಪೇಂಟ್ ಬದಲು ವಾಟರ್‌ಪೇಂಟ್ ಮಾತ್ರ ಬಳಸುತ್ತಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾರಾಟದಲ್ಲಿ ಬಹಳಷ್ಟು ಪೈಪೋಟಿ ಎದುರಿಸುತ್ತಿದ್ದೇವೆ. ಯಾರೋ ತಯಾರಿಸಿದ ಮೂರ್ತಿಗಳನ್ನು ವೃತ್ತಿಪರರಲ್ಲದ ವ್ಯಕ್ತಿಗಳು ಸಗಟಾಗಿ ಖರೀದಿಸಿ ತರುತ್ತಾರೆ. ಮೂಲಬಂಡವಾಳಕ್ಕೆ ಅಲ್ಪಸ್ವಲ್ಪ ಹಣ ಸಿಕ್ಕರೂ ಸಾಕು ಕೊಟ್ಟು ಹೋಗುತ್ತಾರೆ. ಗ್ರಾಹಕರೂ ದರ ಹೇಳಿದರೆ, ಅರ್ಧದಷ್ಟು ಹಣಕ್ಕೆ ಕೇಳುತ್ತಾರೆ. ವರ್ಷವಂತೂ ಗಣೇಶ ಮೂರ್ತಿಗಳ ಮಾರಾಟ ಅಷ್ಟಕ್ಕಷ್ಟೆ ಎನ್ನುತ್ತಾರೆ ಜ್ಯೋತಿ ಚಿತ್ರಗಾರ.
ಕೋಲ್ಕತ್ತದಿಂದ ಚಿಕ್ಕ ಚಿಕ್ಕ ಸುಂದರ ಗಣಪತಿಮೂರ್ತಿಗಳೂ ಅವರ ಬಳಿ ಇದ್ದು, ಆಕರ್ಷಕವಾಗಿವೆ. ಆದರೆ ಜನ ಕೇಳುವುದು ಬಣ್ಣದ ಗಣಪನನ್ನು ಮಾತ್ರ ಎಂದು ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಜನರಲ್ಲಿ ಇನ್ನೂ ಆಸಕ್ತಿ ಬೆಳೆದಿಲ್ಲ ಎಂಬುದನ್ನು ಪರೋಕ್ಷವಾಗಿ ವಿವರಿಸಿದರು.
ಪರಿಸರ ಸ್ನೇಹಿ ಗಣಪತಿ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಅಂತಹ ಮೂರ್ತಿ ತಯಾರಿಸಿದರೂ ಅವುಗಳನ್ನು ಇಷ್ಟಪಡುವವರು ಬೆರಳೆಣಿಕೆ ಜನ ಮಾತ್ರ.ಜ್ಯೋತಿ ಚಿತ್ರಗಾರ ಪಾರಂಪರಿಕ ಗಣೇಶ ಮೂರ್ತಿ ತಯಾರಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.