ADVERTISEMENT

ಮನೆ ಬಾಗಿಲಿಗೆ ಗಣೇಶ ವಿಸರ್ಜನಾ ವಾಹನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 3:23 IST
Last Updated 24 ಆಗಸ್ಟ್ 2020, 3:23 IST
ಯಲಬುರ್ಗಾ ಪಟ್ಟಣ ಪಂಚಾಯಿತಿ ವತಿಯಿಂದ ಗಣೇಶ ವಿಸರ್ಜನೆಗೆ ಮನೆ ಬಾಗಿಲ ಬಳಿ ತೆರಳಿದ ವಿಸರ್ಜನಾ ವಾಹನ
ಯಲಬುರ್ಗಾ ಪಟ್ಟಣ ಪಂಚಾಯಿತಿ ವತಿಯಿಂದ ಗಣೇಶ ವಿಸರ್ಜನೆಗೆ ಮನೆ ಬಾಗಿಲ ಬಳಿ ತೆರಳಿದ ವಿಸರ್ಜನಾ ವಾಹನ   

ಯಲಬುರ್ಗಾ: ಕೋವಿಡ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಗಣೇಶೋತ್ಸವ ಸರಳ ಆಚರಣೆಗೆ ಸರ್ಕಾರ ಅವಕಾಶ ಕೊಟ್ಟಿದೆ. ಈ ಕಾರಣದಿಂದ ಪಟ್ಟಣದ ಬಹುತೇಕ ಇಲಾಖೆಯವರು ಹಾಗೂ ಕುಟುಂಬಗಳು ಗಣೇಶನನ್ನು ಪ್ರತಿಷ್ಠಾಪಿಸಿ ಅದೇ ದಿನವೇ ವಿಸರ್ಜನೆಗೆ ಮುಂದಾಗಿದ್ದು ಕಂಡು ಬಂದಿದೆ.

ಪಟ್ಟಣದಲ್ಲಿ ವಿಸರ್ಜನೆಗೆ ವ್ಯವಸ್ಥೆಯಿಲ್ಲದಿರುವ ಕಾರಣ ಪಟ್ಟಣ ಪಂಚಾಯಿತಿಯವರು ವಿಸರ್ಜನಾ ವಾಹನದ ವ್ಯವಸ್ಥೆ ಮಾಡಿ ಮಾದರಿಯಾದರು.

ಗಣೇಶನನ್ನು ವಿಸರ್ಜನೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಪಟ್ಟಣದ ಬಹುತೇಕ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ADVERTISEMENT

ಪಂಚಾಯಿತಿ ವಾಹನದಲ್ಲಿ ನೀರು ತುಂಬಿದ ಎರಡು ಬ್ಯಾರಲ್ ಇಟ್ಟುಕೊಂಡು ವಿವಿಧ ವಾರ್ಡ್‍ದಲ್ಲಿ ಸಂಚರಿಸಿ ವಿಸರ್ಜನಾ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಅನೇಕರು ವಾಹನ ಬಂದ ಕೂಡಲೇ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿ ಬ್ಯಾರಲ್‍ದಲ್ಲಿ ವಿಸರ್ಜಿಸಿದರು.

ಪರಿಸರ ಸ್ನೇಹಿ ಗಣೇಶನನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂಚಾಯಿತಿ ಬೆಂಬಲಿಸುತ್ತಿದೆ. ಹಬ್ಬ ಆಚರಣೆಯನ್ನು ಕೈ ಬಿಡಲು ಸಾಧ್ಯವಾಗದೇ ಇರುವ ಕಾರಣ ಜನತೆಗೆ ವಿಸರ್ಜಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ಳಲಾಗಿತ್ತು. ಹಾಗೆಯೇ ಈ ವ್ಯವಸ್ಥೆಗೆ ಸ್ಥಳೀಯ ಹೆಚ್ಚು ಖುಷಿ ಪಟ್ಟಿದ್ದಾರೆ ಎಂದು ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಅಭಿಪ್ರಾಯಪಟ್ಟಿದ್ದಾರೆ.

ಮನೆ ಬಾಗಿಲಿಗೆ ಬಂದು ಗಣೇಶನ ವಿಸರ್ಜನೆ ಕಾರ್ಯಕ್ಕೆ ಮುಂದಾದ ಪಂಚಾಯಿತಿ ಸಿಬ್ಬಂದಿಯ ಕಾರ್ಯ ವೈಖರಿಗೆ ಮುಖಂಡ ಶರಣಪ್ಪ ಕೊಡಗಲಿ, ಹನಮಂತಪ್ಪ ದನಕಾಯಿ, ಸುರೇಶ ಕಮ್ಮಾರ, ಚಂದ್ರಶೇಖರ ಕಮ್ಮಾರ, ಪ್ರಶಾಂತ ಬಡಿಗೇರ, ರೇಣುಕಪ್ಪ ಕಮ್ಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.