ADVERTISEMENT

ಗಣೇಶ ಮೂರ್ತಿ ವಿಸರ್ಜನೆ: ಹಳೆ ವೈಷಮ್ಯಕ್ಕೆ ಒಬ್ಬನಿಗೆ ಚಾಕು ಇರಿತ, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 3:59 IST
Last Updated 24 ಸೆಪ್ಟೆಂಬರ್ 2024, 3:59 IST
   

ಗಂಗಾವತಿ: ಇಲ್ಲಿನ ಯಶೋಧಾ ಆಸ್ಪತ್ರೆ ಬಳಿ ಸೋಮವಾರ ರಾತ್ರಿ ಗುಂಡಮ್ಮ ಕ್ಯಾಂಪಿನ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು, ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ‌. ಮೂವರಿಗೆ ಗಾಯಗಳಾಗಿವೆ.

ಚಾರು ಇರಿತಕ್ಕೆ ಒಳಗಾದ ಅಂಬೇಡ್ಕರ್ ನಗರದ ಶಿವು (38) ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಗಣೇಶ್, ಮಂಜು ಹಾಗೂ ಸಾಗರ್ ಹಲ್ಲೆಗೊಳಗಾದವರು.

ಗುಂಡಮ್ಮ ಕ್ಯಾಂಪಿನಲ್ಲಿ ಗಣೇಶ ಮಂಡಳಿಯಿಂದ 17ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಅದ್ದೂರಿಯಾಗಿ ಆಯೋಜಿಸಿ, ಡಿಜೆ ಬಳಸಿ ಯುವಕರು ಕುಣಿಯುತ್ತಿದ್ದರು. ಇದೆ ವೇಳೆಯಲ್ಲಿ ಏಕಾಏಕಿ ಎರಡು ಗುಂಪುಗಳ ನಡುವೆ ವಾದ-ವಿವಾದಗಳಾಗಿ ಮೊದಲಿಗೆ ಸಣ್ಣ ಜಗಳವಾಗಿತ್ತು.

ADVERTISEMENT

ನಂತರ ಈ ವಿವಾದ ಕೈ ಮಿಲಾಯಿಸುವ ಹಂತಕ್ಕೆ ಹೋಗಿ, ನಂತರ ಹಲ್ಲೆ ನಡೆಯಿತು. ಒಂದು ಗುಂಪಿನ ಕಡೆಯವರು ಇನ್ನೊಂದು ಗುಂಪಿನವರ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ.

ಗಾಯಗೊಂಡವರು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಗೆ ಹಳೆ ವೈಷ್ಯಮ್ಯ, ಜೂಜಾಟದ ವೇಳೆ ನಡೆಸಿದ್ದ ವ್ಯವಹಾರ ಕಾರಣ ಎಂದು ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಮುತ್ತಣ್ಣ, ಧರ್ಮಣ್ಣ, ಬಾಬು, ವೆಂಕಟೇಶ, ಜಂಭ ಸೇರಿದಂತೆ ಒಟ್ಟು 20 ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಕೆಲವು ಕಡೆ ಗಣೇಶ ವಿಸರ್ಜನಾ ‌ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗಳು ಮಾಸುವ ಮುನ್ನವೇ ಗಂಗಾವತಿಯಲ್ಲಿಯೂ ಚಾಕು ಇರಿತವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.