ADVERTISEMENT

ಕೊಪ್ಪಳ: ಗಣೇಶೋತ್ಸವಕ್ಕೆ ಕೋವಿಡ್‌ ವಿಘ್ನ

ಮಾರುಕಟ್ಟೆಯಲ್ಲಿ ಕಾಣದ ಉತ್ಸಾಹ: ಗ್ರಾಹಕರಿಲ್ಲದೆ ವ್ಯಾಪಾರಿಗಳಿಗೂ ಚಿಂತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:42 IST
Last Updated 10 ಸೆಪ್ಟೆಂಬರ್ 2021, 5:42 IST
ಕೊಪ್ಪಳದ ನಗರಸಭೆ ಮಳಿಗೆಯಲ್ಲಿ ಗುರುವಾರ ಗಣೇಶ ವಿಗ್ರಹ ಖರೀದಿಸುತ್ತಿರುವ ಗ್ರಾಹಕರು
ಕೊಪ್ಪಳದ ನಗರಸಭೆ ಮಳಿಗೆಯಲ್ಲಿ ಗುರುವಾರ ಗಣೇಶ ವಿಗ್ರಹ ಖರೀದಿಸುತ್ತಿರುವ ಗ್ರಾಹಕರು   

ಕೊಪ್ಪಳ: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶನಿಗೆ ಅಗ್ರಪೂಜೆ. ವಿಘ್ನ ನಿವಾರಕ, ಸಿದ್ಧಿ, ಬುದ್ಧಿಗಳ ಜೊತೆ ವಿಘ್ನ ನಿವಾರಿಸುವ ವಿನಾಯಕನ ಉತ್ಸವಕ್ಕೆ ಈ ಸಾರಿಯೂ ಕೊರೊನಾ ಸೋಂಕು ಅಡ್ಡಿಯಾಗಿದೆ.

ಗಜಾನನ ಪ್ರತಿಷ್ಠಾಪನೆಯ ಹಿಂದಿನ ದಿನದಿಂದ ಹಿಡಿದು 11 ದಿನಗಳವರೆಗೆ ಅತ್ಯಂತ ವೈಭವ, ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ವಿಘ್ನೇಶನ ಹಬ್ಬಕ್ಕೆ ಕೋವಿಡ್‌-19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಅನೇಕ ಗಣೇಶ ಮಂಡಳಿಗಳು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಹಿಂದೇಟು ಹಾಕುತ್ತಿವೆ.

ಮನೆಗಳಲ್ಲಿ ಸಾಂಪ್ರದಾಯಿಕ ಪ್ರತಿಷ್ಠಾಪನೆಗೆ ಯಾವುದೇ ಅಡ್ಡಿಯಿಲ್ಲ ದಿದ್ದರೂ ಪಟಾಕಿ, ಅಲಂಕಾರಿಕ ಸಾಮಾಗ್ರಿ, ಹೂವು, ಹಣ್ಣುಗಳ ಖರೀದಿಗೆ ಮಾರುಕಟ್ಟೆಗೆ ಮುಗಿಬೀಳುತ್ತಿದ್ದ ಜನರಲ್ಲಿಯೂ ಕೂಡಾ ಅಷ್ಟೊಂದು ಉತ್ಸಾಹವಿಲ್ಲದೆ ಶಾಸ್ತ್ರಕ್ಕೆ ಪೂಜೆ ಸಲ್ಲಿಸುವ ಮೊರೆ ಹೋಗಿದ್ದಾರೆ. ಇದರಿಂದ ರಸ್ತೆಗಳಲ್ಲಿ ಜಗಮಗಿಸುವ ವಿದ್ಯುತ್ ದೀಪ, ಭಜನೆ, ಧ್ವನಿವರ್ಧಕಗಳು, ಗಲ್ಲಿಗೆ ಒಂದು ಮಂಡಳಿಯ ಗಣೇಶ ಪ್ರತಿಷ್ಠಾಪನೆಯಾಗದೇ ಹಬ್ಬದ ಸಂಭ್ರಮವನ್ನು ಮೊಟುಕುಗೊಳಿಸಿದೆ.

ADVERTISEMENT

ಮಾರುಕಟ್ಟೆಯಲ್ಲಿ ಜನಜಂಗುಳಿ: ನಗರದ ಜೆಪಿ ಮಾರುಕಟ್ಟೆ, ಜವಾಹರ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶದಲ್ಲಿ ಹೂವು, ಹಣ್ಣಿನ ಮಳಿಗೆಗಳಲ್ಲಿ ಜನ ಜಂಗುಳಿ ಇತ್ತು. ಸಾರ್ವಜನಿಕವಾಗಿ ಗಣೇಶೋತ್ಸವಅದ್ಧೂರಿ ಆಚರಣೆಗೆ ನಿರ್ಬಂಧ ಇರುವುದರಿಂದ ಹೆಚ್ಚಿನ ಜನ ಕಾಣಿಸಲಿಲ್ಲ. ಗುರುವಾರ ಮಹಿಳೆಯರು ಮನೆಗಳಲ್ಲಿ ಗೌರಿವ್ರತವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಗರದ ವಿವಿಧ ಭಾಗಗಳಲ್ಲಿ ಯುವಕರು ಕುಟೀರ, ಮಂಟಪಗಳ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು. 4 ಅಡಿಗಿಂತ ಹೆಚ್ಚು ಎತ್ತರದ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ, ಅದ್ಧೂರಿ ಕಾರ್ಯಕ್ರಮ ಹಾಗೂ ಮೆರವಣಿಗೆಗೆ ನಿರ್ಬಂಧ ಹೇರಿರುವುದರಿಂದ ಚಿಕ್ಕ ಗಣೇಶ ಮೂರ್ತಿಯನ್ನು ಕೂರಿಸಿ, ಆರಾಧಿಸಲು ಸಿದ್ಧತೆ ನಡೆಸಿರುವುದು ಕಂಡು ಬಂತು.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂಮಾಲೆ ಹಾಗೂ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ರಸ್ತೆ ಬದಿಯೂ ಮಾರಾಟ ಜೋರಾಗಿತ್ತು. ಹಣ್ಣು, ಹೂವುಗಳ ಬೆಲೆ ಹೆಚ್ಚಾಗಿದ್ದರೂ ಜನರು ಅಗತ್ಯಕ್ಕೆ ತಕ್ಕಷ್ಟು ಕೊಂಡುಕೊಂಡರು.

ಚೆಂಡು ಹೂ ಕೆ.ಜಿ.ಗೆ ₹ 75 ರಿಂದ ₹ 90 ರವರೆಗೂ ಮಾರಾಟವಾಯಿತು. ಸೇವಂತಿಗೆ ಹೂವಿನ ಮಾಲೆಗೆ₹ 100 ರಿಂದ ₹ 130, ಮಲ್ಲಿಗೆ ಕೆ.ಜಿ.ಗೆ ₹ 2000, ಗುಲಾಬಿ ಕೆ.ಜಿ.ಗೆ ₹ 350ಗೆ ಮಾರಾಟವಾಯಿತು. ಸೇಬು, ಮೋಸಂಬಿ, ಕಿತ್ತಳೆ, ಪೇರಲ ಸೇರಿ ಬಹುತೇಕ ಹಣ್ಣುಗಳ ಬೆಲೆ ₹ 20 ರಿಂದ ₹ 50 ಹೆಚ್ಚಿಗೆಯಾಗಿದೆ. ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಡಜನ್‌ಗೆ ₹ 50 ರಿಂದ ₹ 60ಕ್ಕೆ ಮಾರಾಟ ಮಾಡಲಾಗುತ್ತಿದೆ.

ತರಕಾರಿ ಖರೀದಿಯೂ ಜೋರಾಗಿತ್ತು, ಆದರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಟೊಮೆಟೊ ಹಾಗೂ ಬದನೆಕಾಯಿ ಬೆಲೆ ಮಾತ್ರ ಕೆ.ಜಿ.ಗೆ ₹ 10ರಿಂದ ₹ 20ರವರೆಗೆ ಕಡಿಮೆಯಾಗಿದೆ.ತೆಂಗಿನಕಾಯಿ, ನಿಂಬೆಹಣ್ಣು ಸೇರಿ ಇನ್ನಿತರ ಪೂಜಾ ಸಾಮಗ್ರಿಗಳಿಗೂ ಬೇಡಿಕೆ ಹೆಚ್ಚಾಗಿದೆ.

‘ಕೊರೊನಾ ಕಾರಣಕ್ಕೆ ಹೆಚ್ಚು ಎತ್ತರದ ಮೂರ್ತಿಗಳನ್ನು ತಯಾರಿಸಲಿಲ್ಲ. ಈ ಬಾರಿ ಬಣ್ಣದ ಮೂರ್ತಿಗಳಿಗಿಂತ ಪರಿಸರಸ್ನೇಹಿ ಹಾಗೂ ಜೇಡಿಮಣ್ಣಿನ ಮೂರ್ತಿಗಳನ್ನು ಜನ ಹೆಚ್ಚಾಗಿ ಖರೀದಿಸಿದ್ದಾರೆ. 2 ಅಡಿ ಎತ್ತರದ ಗಣೇಶ ಮೂರ್ತಿ ದರ ₹850ರಿಂದ ₹4000ವರೆಗೆ ಇದೆ. 4 ಅಡಿ ಗಣೇಶ ಮೂರ್ತಿಗಳ ದರ ₹9000 ದಿಂದ ₹15,000ರವರೆಗೆ ಇದೆ’ ಎಂದು ಗಣೇಶ ಮೂರ್ತಿ ತಯಾರಕಚಿತ್ರಗಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.