ADVERTISEMENT

ಗಂಗಾವತಿ: ಆದಾಯವಿದ್ದರೂ, ಮೂಲಸೌಕರ್ಯಕ್ಕೆ ಬರ!

ಗಂಗಾವತಿ: ಏಳು ದಶಕಗಳು ಕಳೆದರೂ ಹೈಟೆಕ್‌ ಆಗದ ಎಪಿಎಂಸಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:35 IST
Last Updated 16 ನವೆಂಬರ್ 2025, 4:35 IST
ಎಪಿಎಂಸಿ ಬಳಿಯ ಮುಖ್ಯರಸ್ತೆಯಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯ
ಎಪಿಎಂಸಿ ಬಳಿಯ ಮುಖ್ಯರಸ್ತೆಯಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ತ್ಯಾಜ್ಯ   

ಗಂಗಾವತಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) 72 ವಸಂತಗಳನ್ನು ಪೂರೈಸಿದ್ದರೂ ಮಾರುಕಟ್ಟೆಗೆ ಸುಸಜ್ಜಿತ ರಸ್ತೆ, ಗೋದಾಮು, ರೈತ ಭವನ ಸೌಕರ್ಯ ಹೊರತುಪಡಿಸಿದರೆ ಅಗತ್ಯ ಸೌಕರ್ಯಗಳು ಮರೀಚಿಕೆಯಾಗಿದೆ. ಮಾರುಕಟ್ಟೆ ಮೇಲ್ನೋಟಕ್ಕೆ ಸುಂದರವಾಗಿದ್ದು ಒಳಗೆ ಅವ್ಯವಸ್ಥೆಯ ಅಗರವಾಗಿದೆ.

ಎಪಿಎಂಸಿಯಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆವಿದ್ದರೂ ಲಾರಿ, ಬೈಕ್, ಕಾರುಗಳು ಎಲ್ಲೆಂದರಲ್ಲೆ ರಸ್ತೆ ಒತ್ತುವರಿ ಮಾಡಿಕೊಂಡು ನಿಲ್ಲುತ್ತವೆ. ತರಕಾರಿ ಖರೀದಿಗೆ ಬರಲು ಗ್ರಾಹಕರು, ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ.

164 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಮಾರುಕಟ್ಟೆಯಲ್ಲಿ ತರಕಾರಿ, ವೇ ಬ್ರಿಡ್ಜ್, ಭತ್ತ ಸೇರಿ ಏಕದಳ ಧಾನ್ಯಗಳ ಮಾರಾಟ ಜರುಗುತ್ತದೆ. ವರ್ಷದಿಂದ ವರ್ಷಕ್ಕೆ ಎಪಿಎಂಸಿ ಆದಾಯ ಹೆಚ್ಚುತ್ತಲೇ ಇದೆ. ರೈತರು, ರಪ್ತುದಾರರು, ಕಮಿಷನ್ ಏಜೆಂಟ್, ವರ್ತಕರು, ದಾಸ್ತಾನುದಾರರು, ಚಿಲ್ಲರೆ ಮಾರಾಟಗಾರರು, ಹಮಾಲಿಗಳು ನಿತ್ಯ ಮಾರುಕಟ್ಟೆಯಲ್ಲಿ ತಮ್ಮ ಕಾಯಕ ನಡೆಸುತ್ತಾರೆ. ಆದರೆ ಇಲ್ಲಿ ಜನಸಂಖ್ಯೆಗೆ ತಕ್ಕಂತೆ ಸೌಕರ್ಯಗಳೇ ದೊರೆಯಲ್ಲ ಎಂಬುದು ಮಾರುಕಟ್ಟೆಗೆ ಭೇಟಿ ನೀಡುವ ಪ್ರತಿಯೊಬ್ಬರ ದೂರಾಗಿದೆ.

ADVERTISEMENT

ಸ್ವಚ್ಚತೆ ಮಾಯ: ಎಪಿಎಂಸಿಯಲ್ಲಿ ನಿತ್ಯ ಬೆಳಿಗಿನ ಜಾವ 3ರಿಂದ 11ರವರೆಗೆ ತರಕಾರಿ ಮಾರುಕಟ್ಟೆ ನಡೆಯುತ್ತದೆ. ಇಲ್ಲಿನ ಚಿಲ್ಲರೆ ವ್ಯಾಪಾರಿಗಳು, ದಲ್ಲಾಳಿಗಳು, ಅಂಗಡಿಗಳ ಮಾಲೀಕರು ಬಳಕೆಗೆ ಬಾರದ ತರಕಾರಿ, ಸೊಪ್ಪು, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚರಂಡಿ ಸೇರಿದಂತೆ ಖಾಲಿ ಸ್ಥಳಗಳಲ್ಲಿ ಎಸೆಯುತ್ತಾರೆ. ರಾಶಿಗಟ್ಟೆಲೆ ಸಂಗ್ರಹವಾಗಿ ಕಸ ದುರ್ವಾಸನೆ ಜೊತೆಗೆ ಸೊಳ್ಳೆಗಳ ಆವಾಸ ಸ್ಥಾನಗಳಾಗಿ ನಿರ್ಮಾಣವಾಗುತ್ತಿದೆ.

ಬಯಲೆ ದಿಕ್ಕು: ಎಪಿಎಂಸಿಯಲ್ಲಿ ಎರಡು ಕಡೆ ಶೌಚಾಲಯ ಪ್ರಾಂಗಣಗಳಿದೆ. ಆದರೆ, ಅವುಗಳ ನಿರ್ವಹಣೆಯಿಲ್ಲದ ಕಾರಣ ಇದ್ದು ಇಲ್ಲದಂತಾಗಿವೆ. ಮಾರುಕಟ್ಟೆಗೆ ನಿತ್ಯ ಸಾವಿರಾರು ಜನ ಭೇಟಿ ನೀಡುವ ಕಾರಣ ಅನಿವಾರ್ಯವಾಗಿ ಎಲ್ಲರೂ ಮಲ, ಮೂರ್ತ ವಿಸರ್ಜನೆಗೆ ಎಪಿಎಂಸಿಯಲ್ಲಿ ಬಯಲು ಪ್ರದೇಶವನ್ನೇ ಆಶ್ರಯಿಸುತ್ತಾರೆ.  

ಇಸ್ಪೀಟ್ ಅಡ್ಡೆ: ಎಪಿಎಂಸಿಯಲ್ಲಿ ಸಾಕಷ್ಟು ಭತ್ತ ಖರೀದಿ ಮಳಿಗೆಗಳು ನಿರ್ಮಾಣವಾಗಿದ್ದರೂ ಇಲ್ಲಿ ಕೆಲವರು ವ್ಯಾಪಾರ ವಹಿವಾಟಿಗೆ ಬಳಸದೆ ಗೌಪ್ಯವಾಗಿ ಹೊರಭಾಗದಿಂದ ಜನರನ್ನು ಕರೆಯಿಸಿ ಇಸ್ಪೀಟ್ ಜೂಜು ಆಡಿಸಲಾಗುತ್ತದೆ ಎನ್ನುವ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಹಲವರು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಎಪಿಎಂಸಿ ಸದ್ಯ ಅನೈತಿಕ ಮತ್ತು ಕಿಳಿಗೇಡಿಗಳ ತಾಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಎಪಿಎಂಸಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳಿದ್ದರೂ ಸ್ವಚ್ಛತೆಯಿಲ್ಲ. ಕೆಲ ಟ್ಯಾಂಕ್‌ಗಳಲ್ಲಿ ನೀರು ಬರಲ್ಲ. ಎಪಿಎಂಸಿ ಉದ್ಯಾನವನ ನಿರ್ವಹಣೆಯಿಲ್ಲದೆ ಬಳಲುತ್ತಿದೆ. ಖಾಲಿ ನಿವೇಶಗಳಲ್ಲಿ ಕೊಳಚೆ ನೀರು ನಿಂತು ಗಬ್ಬು ನಾರುತ್ತಿವೆ. ಕಣ್ಣು ಹಾಸಿದ ಕಡೆಯಲ್ಲೆ ಪ್ಲಾಸ್ಟಿಕ್ ತ್ಯಾಜ್ಯವೇ ಕಣ್ಣಿಗೆ ಗೋಚರಿಸುವುದು ಸಾಮಾನ್ಯ ಎನ್ನುವುದು ಜನರ ದೂರು.

ಎಪಿಎಂಸಿಯಲ್ಲಿನ ಖಾಲಿ ನಿವೇಶನದಲ್ಲಿ ನಿಂತಿರುವ ಕೊಳಚೆ ನೀರು
ಎಪಿಎಂಸಿಯಲ್ಲಿ ಹಾಳುಬಿದ್ದ ಮೂತ್ರಾಲಯ
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಟಮಾಟೆ ಸೇರಿ ಇತರೆ ತರಕಾರಿ ಬಿಸಾಡಿ ಹಾಳು ಮಾಡಿರುವುದು

ಅಸ್ವಚ್ಚತೆಯಲ್ಲಿ ತರಕಾರಿ ಮಾರುಕಟ್ಟೆ ಇಸ್ಪೀಟ್ ಅಡ್ಡೆಯಾದ ಎಪಿಎಂಸಿ; ಹಲವರ ಆರೋಪ ಇದ್ದೂ ಇಲ್ಲದಂತಾದ ಶೌಚಾಲಯ ವ್ಯವಸ್ಥೆ, ಜನರಿಗೆ ಸಮಸ್ಯೆ

ಎಪಿಎಂಸಿಯಲ್ಲಿ ಅಗತ್ಯ ಸೌಕರ್ಯಗಳೇ ಇಲ್ಲ. ಎಲ್ಲೆಂದರಲ್ಲಿ ಕಸ ತರಕಾರಿ ತ್ಯಾಜ್ಯ ಸಂಗ್ರಹವಾಗಿ ನಾರುತ್ತಿದೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಮಳಿಗೆಗಳಲ್ಲಿ ಇಸ್ಪೀಟ್ ಜೂಜು ನಡೆದಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು
ಮಹೇಶ ಗಂಗಾವತಿ ರೈತ 
ಎಪಿಎಂಸಿಯಲ್ಲಿ ಇಸ್ಪೀಟ್ ಜೂಜು ನಡೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಕೋವಿಡ್ ವೇಳೆಯಲ್ಲಿ ಎಪಿಎಂಸಿಗೆ ಆದಾಯ ಕಡಿಮೆಯಿತ್ತು. ಸದ್ಯ ಆದಾಯ ಹೆಚ್ಚಿದ್ದು ಈಗಾಗಲೇ ಎಪಿಎಂಸಿಗೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ
ಸಾವಿತ್ರಿ ಸಹಾಯಕ ಕಾರ್ಯದರ್ಶಿ ಗಂಗಾವತಿ ಎಪಿಎಂಸಿ

3 ವರ್ಷಗಳಿಂದ ನಡೆಯದ ಚುನಾವಣೆ 2022ಕ್ಕೆ ಎಪಿಎಂಸಿಗೆ ಆಡಳಿತ ಮಂಡಳಿ ಕೊನೆಯಾಗಿದ್ದು ಈವರೆಗೆ ಚುನಾವಣೆಯೇ ನಡೆದಿಲ್ಲ. ಚುನಾವಣೆ ಎಪಿಎಂಸಿ ಆಡಳಿತಾಧಿಕಾರಿ ನೇತೃತ್ವದಲ್ಲಿಯೇ ನಡೆಯುತ್ತಿದೆ. ‘ಆಡಳಿತ ಮಂಡಳಿ ಇದರ ಕಾರಣ ಸೂಕ್ತ ಸೌಕರ್ಯಗಳು ಎಲ್ಲೆಲ್ಲಿ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. ಅವರು ಕಚೇರಿ ಕೆಲಸ ಮಾಡುವುದೇ ಹೊರೆಯಾಗಿರುತ್ತದೆ. ಸರ್ಕಾರ ಕೂಡಲೇ ಎಪಿಎಂಸಿಗೆ ಚುನಾವಣೆ ನಡೆಸಬೇಕು’ ಎಂದು ರೈತ ಹನುಮಂತಪ್ಪ ಒತ್ತಾಯಿಸಿದರು.

ಆರ್‌ಎಂಸಿ ಕಟ್ಟುವಿಕೆಯಿಂದ ಎಪಿಎಂಸಿಗೆ ಆದಾಯ ವರ್ಷ;ಗುರಿ;ಬಂದ ಹಣ (₹ ಕೋಟಿಗಳಲ್ಲಿ) 2022-23;4;4.51 2023-24;6;3.20 2024-25;7;6.55 2025-26;9.25;5.12

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.