ಗಂಗಾವತಿ ಬಿಬಿಸಿ ಕಾಲೇಜಿನಲ್ಲಿ ತಾಳಿ ಬಿಚ್ಚಿಕೊಟ್ಟು ಬಂದ ವಿದ್ಯಾರ್ಥಿನಿ ತಾಯಿ ರೇಣುಕಮ್ಮ, ತಂದೆ ಹನುಮಂತಪ್ಪ, ವಿದ್ಯಾರ್ಥಿನಿ ಕಾವೇರಿ
College president untied by student's mother
ಗಂಗಾವತಿ (ಕೊಪ್ಪಳ ಜಿಲ್ಲೆ): ‘ಬಾಕಿ ಶುಲ್ಕ ಪಾವತಿಸಬೇಕು ಎಂದು ಪಟ್ಟು ಹಿಡಿದ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಅವರು ನನ್ನ ತಾಳಿ, ಕಿವಿಯೋಲೆ ಸೇರಿ ಒಡವೆಗಳನ್ನು ಬಿಚ್ಚಿಸಿಕೊಂಡಿದ್ದಾರೆ’ ಎಂದು ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದಾರೆ.
ಕನಕಗಿರಿ ತಾಲ್ಲೂಕಿನ ಮುಸ್ಲಾಪುರ ಗ್ರಾಮದ ವಿದ್ಯಾರ್ಥಿನಿ ಕಾವೇರಿ ಹನುಮಂತಪ್ಪ ವಾಲಿಕರ ಅವರು ಮ್ಯಾನೇಜ್‌ಮೆಂಟ್ ಕೋಟಾದಡಿ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಪ್ರಥಮ ವರ್ಷಕ್ಕೆ ₹10 ಸಾವಿರ ಪ್ರವೇಶ ಶುಲ್ಕ ಪಾವತಿಸಿದ್ದರು. ಉಳಿದ ₹90 ಸಾವಿರ ಶುಲ್ಕವನ್ನು ಹಂತ–ಹಂತವಾಗಿ ಪಾವತಿಸುವುದಾಗಿ ತಿಳಿಸಿದ್ದರು.
ಆದರೆ, ಆರ್ಥಿಕ ದುಸ್ಥಿತಿ ಮತ್ತು ಕೋರ್ಸ್‌ನ ವಿಷಯಗಳು ಕಷ್ಟಕರವಾದ ಕಾರಣಕ್ಕೆ ಕಾವೇರಿ ಅವರು ಬೇರೆ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮುಂದಾಗಿದ್ದರು. ವಿದ್ಯಾರ್ಥಿನಿಯು ಪಾಲಕರ ಜೊತೆಗೆ ಮಂಗಳವಾರ ಕಾಲೇಜಿನ ಚೇರ್ಮನ್ ಡಾ.ಸಿ.ಬಿ. ಚಿನಿವಾಲ ಅವರನ್ನು ಭೇಟಿ ಮಾಡಿ, ಟಿಸಿ, ಅಂಕಪಟ್ಟಿ ಹಿಂದಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
‘ಕೋರ್ಸ್ ನಾಲ್ಕು ವರ್ಷಗಳ ಅವಧಿಗೆ ಇದೆ. ಬಾಕಿ ಇರುವ ಎಲ್ಲ ಹಣ ಪಾವತಿಸಿದರೆ ಮಾತ್ರ ದಾಖಲೆ ನೀಡುತ್ತೇವೆ. ನಿಮಗೆ ದಾಖಲೆಗಳು ಬೇಕಿದ್ದರೆ ಕೊರಳಲ್ಲಿರುವ ಚಿನ್ನದ ತಾಳಿ ಬಿಚ್ಚಿಕೊಡಿ’ ಎಂದು ಚೇರ್ಮನ್ ರೇಗಾಡಿದರು. ಮಗಳ ಭವಿಷ್ಯದ ಹಿತದೃಷ್ಟಿಯಿಂದ ಪತಿಯ ಮುಂದೆಯೇ ತಾಳಿ, ಬೆಂಡೋಲೆ, ಬುಗುಡಿಕಟ್ಟಿಯನ್ನು ಬಿಚ್ಚಿ ಕೊಟ್ಟುಬಂದಿದ್ದೇನೆ’ ಎಂದು ವಿದ್ಯಾರ್ಥಿನಿಯ ತಾಯಿ ರೇಣುಕಮ್ಮ ಕಣ್ಣೀರಿಟ್ಟರು.
’ಶುಲ್ಕ ಕೇಳಿದ್ದಕ್ಕೆ ಒಡೆವೆ ಬಿಚ್ಚಿಟ್ಟರು’
‘ಭಾವನಾತ್ಮಕವಾಗಿ ತಾಳಿ ಬಿಚ್ಚಿ ಕೊಟ್ಟಿದ್ದೇನೆ ಹೊರತು ತಾಳಿ ಕೊಡುವಂತೆ ಕೇಳಿಲ್ಲ ಎಂದು ವಿದ್ಯಾರ್ಥಿನಿಯ ಪಾಲಕರು ಪತ್ರ ಬರೆದುಕೊಟ್ಟಿದ್ದಾರೆ. ಅವರಿಗೆ ಎಲ್ಲ ದಾಖಲೆಗಳನ್ನೂ ನೀಡಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದೇವೆ’ ಎಂದು ಸಂಸ್ಥೆಯ ಚೇರ್ಮನ್ ಡಾ.ಸಿ.ಬಿ. ಚಿನಿವಾಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ವಿದ್ಯಾರ್ಥಿನಿ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದಿದ್ದರು. ಬೇರೆ ಕಾಲೇಜಿಗೆ ಪ್ರವೇಶ ಪಡೆಯಲು ದಾಖಲೆಗಳನ್ನು ಕೇಳಿದ್ದರು. ಬಾಕಿ ಹಣ ಪಾವತಿಸುವಂತೆ ಕೇಳಿದ್ದಕ್ಕೆ ವಿದ್ಯಾರ್ಥಿನಿ ತಾಯಿ ಕಿವಿಕೊಲೆ ಬಿಚ್ಚಿ ಟೇಬಲ್ ಮೇಲೆ ಇಟ್ಟಿದ್ದರು. ನಾವೇನೂ ಒಡವೆ ನೀಡುವಂತೆ ಕೇಳಿಲ್ಲ’ ಎಂದು ತಿಳಿಸಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಟಿಸಿ ಅಂಕಪಟ್ಟಿ ನೀಡುವಂತೆ ಗೋಗರೆದರೂ ಕೊಡುತ್ತಿರಲಿಲ್ಲ. ಬಾಕಿ ಶುಲ್ಕ ಪಾವತಿಸುವಂತೆ ನಿಂದಿಸಿದ್ದಾರೆ.ಕಾವೇರಿ, ವಿದ್ಯಾರ್ಥಿನಿ, ಕನಕಗಿರಿ
ದಾಖಲೆಗಳು ಬೇಕಾದರೆ ಕೊರಳಲ್ಲಿನ ತಾಳಿ ಬಿಚ್ಚಿಕೊಡುವಂತೆ ಕೇಳಿದ್ದರಿಂದ ಅನಿವಾರ್ಯವಾಗಿ ತಾಳಿ ಬೆಂಡೋಲೆ ಬುಗುಡುಕಟ್ಟಿ ಬಿಚ್ಚಿ ಚೇರ್ಮನ್‌ಗೆ ಕೊಟ್ಟಿದ್ದೇವೆರೇಣುಕಮ್ಮ, ವಿದ್ಯಾರ್ಥಿನಿ ತಾಯಿ, ಕನಕಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.