ಗಂಗಾವತಿ: ಇಲ್ಲಿನ ನಗರಸಭೆಯ ಆರು ತಿಂಗಳ ಅಧಿಕಾರಾವಧಿಗೆ ಶುಕ್ರವಾರ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿ, ಮೂಲ ಮತ್ತು ವಲಸೆ ಬಿಜೆಪಿ ಆಕಾಂಕ್ಷಿಗಳಿಗೆ ಮುಖಭಂಗ ಉಂಟು ಮಾಡಿದ್ದಾರೆ.
ನಗರಸಭೆ ಕೊನೆಯ 15 ತಿಂಗಳ ಅಧಿಕಾರಾವಧಿಯಲ್ಲಿ 7 ತಿಂಗಳ ಆಡಳಿತ ನಡೆಸಿ, ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ನೀಡಿದ ನಂತರ, ಕೊನೆಯ 6 ತಿಂಗಳ ಅಧಿಕಾರವಧಿ ಅಧ್ಯಕ್ಷ ಸ್ಥಾನಕ್ಕೆ ಮೂಲ ಬಿಜೆಪಿ ನಗರಸಭೆ ಸದಸ್ಯ ಪರಶುರಾಮ ಮೆಡ್ಡೇರಾ, ವಲಸೆ ಬಿಜೆಪಿ ಸದಸ್ಯ ಅಜಯ್ ಬಿಚ್ಚಾಲಿ ನಡುವೆ ತೀವ್ರ ಪೈಪೋಟಿ ಇತ್ತು.
ಬದಲಾದ ಪರಿಸ್ಥಿತಿ, ಹಾಲಿ ಶಾಸಕರ ಮತ್ತು ಮಾಜಿ ಬಿಜೆಪಿ ಶಾಸಕ, ಸಂಸದ ಸೇರಿ ಹಿರಿಯ ನಾಯಕ, ಮುಖಂಡರು, ಬಿಜೆಪಿ ನಗರಸಭೆ ಸದಸ್ಯರ ನಡುವಿನ ಸಮನ್ವಯ ಕೊರತೆ, ಭಿನ್ನಭಿಪ್ರಾಯಗಳ ನಡುವೆ ಶಾಸಕ ಜಿ.ಜನಾರ್ದನರೆಡ್ಡಿ ಬೆಂಬಲಿತ ಅಭ್ಯರ್ಥಿ ಅಜಯ್ ಬಿಚ್ಚಾಲಿ ನಾಮಪತ್ರ ಸಲ್ಲಿಕೆಯನ್ನೇ ಮಾಡಲಿಲ್ಲ.
ಪರಶುರಾಮ ಮಡ್ಡೇರಾ ಅವರಿಗೆ ಶಾಸಕ ಜಿ. ಜನಾರ್ದನರೆಡ್ಡಿ ಅಧ್ಯಕ್ಷ ಪಟ್ಟ ಕೊಡಿಸಲು ಆಸಕ್ತಿ ತೋರದ ಕಾರಣ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿ, ಕೊನೆಯಲ್ಲಿ ಹಿಂಪಡೆದರು.
ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ (ಹಿಂದುಳಿದ ವರ್ಗ ಅ) ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿಗೆ ಬೆಂಬಲಿಸಿದ ನಗರಸಭೆ 2ನೇ ವಾರ್ಡಿನ ಈರಬಾಯಿ, ಕಾಂಗ್ರೆಸ್ ಅಭ್ಯರ್ಥಿ ಖಾಸಿಂಸಾಬ ಗದ್ವಾಲ್ ನಡುವೆ ಪೈಪೋಟಿ ನಡೆಯಿತು. ಒಟ್ಟು 36 ಮತಗಳಲ್ಲಿ ಈರಬಾಯಿ 28 ಮತ ಪಡೆದು ಅಧ್ಯಕ್ಷರಾದರೆ, ಖಾಸಿಂಸಾಬ 8 ಮತ ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ (ಪರಿಶಿಷ್ಟ ಜಾತಿ ಮಹಿಳೆ) 32ನೇ ವಾರ್ಡಿನ ಹುಲಿಗೆಮ್ಮ ಕಿರಿಕಿರಿ ಸ್ಪರ್ಧಿಸಿ 7 ಮತಗಳು ಪಡೆದಿದ್ದು, ರೆಡ್ಡಿ ಬೆಂಬಲಿತ ಅಭ್ಯರ್ಥಿ ಸುಧಾ ಸೋಮನಾಥ 29 ಮತಗಳು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ನಗರಸಭೆ ಮೊದಲ ಹಂತದ ಆಡಳಿತವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ, ಇವರು ಉಪಾಧ್ಯಕ್ಷರಾಗಿದ್ದರು. ಈಗ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿದ್ದಾರೆ.
ಅಕಾಂಕ್ಷಿತರಲ್ಲದವರಿಗೆ ಅಧಿಕಾರ ಪಟ್ಟ: ಈಗ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿಗಳು ಆಕಾಂಕ್ಷಿಗಳೇ ಆಗಿರಲಿಲ್ಲ. ಶಾಸಕ ಜಿ.ಜನಾರ್ದನರೆಡ್ಡಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನವನ್ನು ಅಕಾಂಕ್ಷಿತರಿಗೆ ತಪ್ಪಿಸಿ, ಮಹಿಳೆಯರಿಗೆ ಮಣೆಹಾಕಿ ಅಧಿಕಾರ ಪಟ್ಟಕಟ್ಟಿದ್ದಾರೆ.
‘ಮಹಿಳೆಯರಿಗೆ ಆದ್ಯತೆ ನೀಡುವ ಆಶಯ’
ನಂತರ ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ ‘ನರೇಂದ್ರ ಮೋದಿ ಆಶಯದಂತೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದೆ’ ಎಂದರು. ಪಕ್ಷದ ಹಿತದೃಷ್ಟಿಯಿಂದ ಅಜಯ್ ಪರಶುರಾಮ ಮನವೊಲಿಸಲಾಗಿದೆ. ಕೆಲವೇ ದಿನಗಳಲ್ಲಿ ನಗರೋತ್ಥಾನದಡಿ ನಗರದ ಎಲ್ಲ ವಾರ್ಡ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಕಾಮಗಾರಿಗಳಿಗೆ ಬೇಕಾಗುವ ಅನುದಾನ ಬಿಡುಗಡೆಯಾಗಿದೆ. ಮೇ 31ರ ಒಳಗಾಗಿ ಎಲ್ಲ ವ್ಯಾಪಾರಿಗಳನ್ನು ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುತ್ತದೆ ಎಂದರು. ಚುನಾವಣೆ ನಿಮಿತ್ತ ನಗರಸಭೆ ಬಳಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಮಾಜಿ ಶಾಸಕ ಪರಣ್ಣ ಮುನವಳ್ಳಿ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಿರೂಪಾಕ್ಷಪ್ಪ ಸಿಂಗನಾಳ ಪೌರಾಯುಕ್ತರ ಆರ್.ವಿ ರೂಪಾಕ್ಷಮೂರ್ತಿ ಸೇರಿ ನಗರಸಭೆ ಸದಸ್ಯರು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.