ಗಂಗಾವತಿ: ಇಲ್ಲಿನ ವಿದ್ಯಾನಗರದಲ್ಲಿರುವ ಗಂಗಾವತಿ ರೈಲು ನಿಲ್ದಾಣ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಪ್ರಯಾಣಿಕರು ಕುಡಿಯುವ ನೀರು, ಶೌಚಾಲಯ, ಲಿಫ್ಟ್ ಸೌಲಭ್ಯಕ್ಕೆ ಪರದಾಡಬೇಕಾಗಿದೆ.
ಸಾಕಷ್ಟು ಹೋರಾಟದ ಬಳಿಕ 2018ರಲ್ಲಿ ಗಂಗಾವತಿ-ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ಆರಂಭವಾಗಿದ್ದು, ಏಳು ವರ್ಷಗಳು ಉರುಳಿದರೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ರೈಲ್ವೆ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ಪ್ರಯಾಣಿಕರು ದೂರುತ್ತಾರೆ. ಇರುವ ಕೆಲ ಸೌಲಭ್ಯಗಳು ಇದ್ದೂ ಇಲ್ಲದಂತಾಗಿವೆ.
ಇಲ್ಲಿನ ನಿಲ್ದಾಣದಿಂದ ಹುಬ್ಬಳ್ಳಿ, ಯಶವಂತಪುರಕ್ಕೆ ರೈಲು ತೆರಳಲಿದ್ದು ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಎಲ್ಲೆಂದರಲ್ಲಿ ಚಹಾ ಕಪ್‌ಗಳು, ಕುರುಕಲು ತಿಂಡಿ, ಗುಟ್ಕಾ ತಿಂದು ಬೀಸಾಡಿದ ತ್ಯಾಜ್ಯ ಬಿದ್ದಿವೆ. ಪ್ರಯಾಣಿಕರು ಕಾಯುವ ಕೊಠಡಿಯಲ್ಲಿ ಕುರ್ಚಿಗಳು ಮುರಿದು ಹೋಗಿವೆ. ಕೂಡಲು ಆಸನಗಳ ಕೊರತೆಯಿದೆ.
ನಗರ ಪ್ರದೇಶದಿಂದ ಹೊರವಲಯದಲ್ಲಿ ರೈಲು ನಿಲ್ದಾಣ ನಿರ್ಮಾಣ ಮಾಡಿದ್ದರಿಂದ ನಿಲ್ದಾಣಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್‌ಗಳ ಸೌಲಭ್ಯವಿಲ್ಲ. ಪ್ರಯಾಣಿಕರು ಸಾಕಷ್ಟು ಹಣ ತೆತ್ತು ಖಾಸಗಿ ವಾಹನಗಳು ಅಥವಾ ಸ್ವಂತ ವಾಹನದ ಮೊರೆ ಹೋಗುವುದು ಅನಿವಾರ್ಯವಾಗಿದೆ. ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆಬಂದಾಗ ಪ್ರಯಾಣಿಕರಿಗೆ ಫಜೀತಿ ಎದುರಾಗುತ್ತದೆ. ಬಹುತೇಕ ಸೌಲಭ್ಯಗಳು ಇಲ್ಲ ಎನ್ನುವ ಕೊರತೆ ನಿಲ್ದಾಣದಲ್ಲಿ ಕಾಡುತ್ತಿದ್ದು ಅಂಗವಿಕಲರ ಅನುಕೂಲಕ್ಕೆ ನಿರ್ಮಿಸಲಾದ ಲಿಫ್ಟ್ ಮೂರು ತಿಂಗಳಾದರೂ ಉದ್ಘಾಟನೆ ಕಂಡಿಲ್ಲ.
ನಿಲ್ದಾಣದಲ್ಲಿ ಒಂದೇ ಒಂದು ಡಬ್ಬಿ ಶೌಚಾಲಯವಿದ್ದೂ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಪುರುಷರು ಹಾಗೂ ಮಹಿಳೆಯರು ಒಂದೇ ಶೌಚಾಲಯ ಬಳಸಬೇಕಿದೆ. ನೀರಿನ ಸೌಕರ್ಯವೇ ಇಲ್ಲದಂತಾಗಿದೆ. ಹಲವು ಬಾರಿ ಜನಪ್ರತಿನಿಧಿಗಳು ನಿಲ್ದಾಣದಲ್ಲಿ ಮಹಿಳೆಯರ ಮತ್ತು ಪುರುಷರ ಶೌಚಾಲಯಗಳು ನಿರ್ಮಿಸಬೇಕೆಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ರೈಲ್ವೆ ಹೋರಾಟ ಸಮಿತಿ ಸದಸ್ಯರು ಹೇಳುತ್ತಾರೆ. ನಿಲ್ದಾಣದಲ್ಲಿ ನೀರಿನ ಕೊಳವೆ ಇದ್ದರೂ ನೀರು ಬರುವುದಿಲ್ಲ; ಜನ ಹಣ ತೆತ್ತು ಕುಡಿಯುವ ನೀರಿನ ಬಾಟಲ್‌ಗಳನ್ನು ಖರೀದಿಸಬೇಕಾಗಿದೆ.
‘ನಿಲ್ದಾಣದ ಹೊರವಲಯದಲ್ಲಿರುವ ಕಾರಣ ಯುವಕ–ಯುವತಿಯರ ಅನಗತ್ಯ ಓಡಾಟ, ಸಂಜೆ ರೀಲ್ಸ್ ಹುಚ್ಚಾಟ ನಡೆಯುವುದು ಸಾಮಾನ್ಯವಾಗಿದೆ. ಸಂಜೆಯಾಗುತ್ತಿದ್ದಂತೆ ಜೂಜಾಟ ಆಡುವವರಿಗೆ ಅಡ್ಡೆಯಾಗಿದೆ. ಬಳಿಕ ಕುಡುಕರ ತಾಣವಾಗಿ ಮಾರ್ಪಾಡಾಗುತ್ತದೆ’ ಎಂದು ಮರಕುಂಬಿ ಗ್ರಾಮದ ನಿವಾಸಿ ಪ್ರಕಾಶ ರೈಲು ನಿಲ್ದಾಣದ ಅವ್ಯವಸ್ಥೆಯನ್ನು ಹಂಚಿಕೊಂಡರು.
ಇದರ ಬಗ್ಗೆ ಪ್ರತಿಕ್ರಿಯೆ ಪಡೆಯಲು ರೈಲ್ವೆ ನಿಲ್ದಾಣದ ಅಧೀಕ್ಷಕ ಪ್ರಕಾಶರಾವ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ.
ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ ಶೌಚಾಲಯವಿಲ್ಲ ಲಿಫ್ಟ್ ವ್ಯವಸ್ಥೆಯಿಲ್ಲ. ನಮ್ಮ ತಂದೆ-ತಾಯಿಯನ್ನು ನಿಲ್ದಾಣಕ್ಕೆ ಕರೆದುಕೊಂಡು ಬರಲು ಪರದಾಡಬೇಕಾಗಿದೆ.ರಾಹುಲ್ ಪ್ರಯಾಣಿಕ
ರೈಲ್ವೆ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಇರುವ ಶೌಚಾಲಯ ಗಬ್ಬು ನಾರುತ್ತಿದೆ. ನಿಲ್ದಾಣವಷ್ಟೇ ಆದರೆ ಸಾಲದು ಸೌಲಭ್ಯಗಳೂ ಇರಬೇಕು.ರತ್ನಮ್ಮ ಪ್ರಯಾಣಿಕರು
ನೇಮಕವಾಗದ ಸಿಬ್ಬಂದಿ?
ರೈಲ್ವೆ ನಿಲ್ದಾಣದ ಸ್ವಚ್ಛತೆಗೆ ಹೊರಗುತ್ತಿಗೆ ಆಧಾರದಡಿ ₹12 ಸಾವಿರ ವೇತನಕ್ಕೆ ಒಬ್ಬರಂತೆ ಇಬ್ಬರು ಕೆಲಸಗಾರರನ್ನು ತೆಗೆದುಕೊಳ್ಳುವ ಅವಕಾಶ ನಿಲ್ದಾಣದ ಅಧಿಕಾರಿಗಳಿಗಿದೆ. ಆದರೆ ಇಲ್ಲಿನ ಅಧಿಕಾರಿಗಳು ಮಾತ್ರ ಒಬ್ಬ ಯುವಕನಿಗೆ ತಿಂಗಳಿಗೆ ₹3 ಸಾವಿರ ವೇತನ ನೀಡಿ ಎರಡ್ಮೂರು ದಿನಕ್ಕೊಮ್ಮೆ ಸ್ವಚ್ಛತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.