ಗಂಗಾವತಿ: ‘ಇಲ್ಲಿಯ ಮೊಹಬೂಬ ನಗರದ ಬಳಿಯ ಕಿರುಸೇತುವೆಯಿಂದ ಕಳೆದ 3 ದಿನಗಳ ಹಿಂದೆ 4 ವರ್ಷದ ಬಾಲಕ ದುರ್ಗಮ್ಮಹಳ್ಳಕ್ಕೆ ಬಿದ್ದು, ನಾಮಪತ್ತೆ ಆಗಿರುವುದು ದುಃಖಕರ ಸಂಗತಿಯಾಗಿದೆ. ಬಾಲಕನ ಪತ್ತೆಗೆ ಎಸ್‌ಡಿಆರ್‌ಪಿ ನೆರವಿನ ಜೊತೆಗೆ ಅನುಭವಿ ಈಜುಗಾರರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿ ಹೇಳಿದರು.
ಬಾಲಕ ಬಿದ್ದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಬಾಲಕನ ಪತ್ತೆಗೆ ಆನೆಗೊಂದಿ ಅನುಭವಿ ಈಜುಗಾರರು, ತೋರಣಗಲ್ ಜಿಂದಾಲ್‌ನ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಹಳ್ಳದಲ್ಲಿ ತ್ಯಾಜ್ಯ, ದುರ್ವಾಸನೆ ಬೀರುವ ಕೆಸರು ಹೆಚ್ಚಿರುವುದರಿಂದ ಶೋಧಕ್ಕೆ ಅಡ್ಡಿಯಾಗಿದ್ದು, ಎಸ್‌ಡಿಆರ್‌ಪಿ ತಂಡದ ನೆರವು ಪಡೆಯಲಾಗುತ್ತಿದೆ.ಕಿರುಸೇತುವೆಗೆ ಈ ಮೊದಲೇ ತಡೆ ಬೇಲಿಯಿದ್ದು, ನೀರಿನ ಪ್ರವಾಹದಿಂದ ತೆರವುಗೊಳಿಸಲಾಗಿತ್ತು. ಪುನರ್ ಜೋಡಣೆಗೆ ಸ್ಥಳೀಯರು ವಿರೋಧ ಮಾಡಿರುವ ಕಾರಣ, ಆ ಕೆಲಸ ಅಲ್ಲೇ ಕೈಬಿಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ’ ಎಂದರು.
ಪರಿಹಾರಕ್ಕೆ ಪ್ರಯತ್ನ: ಇಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಅವರು, ಮೆಹಬೂಬ ನಗರದ ಕಿರುಸೇತುವೆ ಬಳಿ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಮಗು ಕಳೆದುಕೊಂಡ ತಾಯಿಗೆ ನಗರಸಭೆಯಲ್ಲಿ ಕೆಲಸ ಕೊಡಿಸಲಾಗುತ್ತಿದ್ದು, ಸಿಎಂ ವಿಶೇಷ ನಿಧಿಯಿಂದ ₹ 5 ಲಕ್ಷ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದರು. ಬಾಲಕನ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ವಿತರಿಸಿದರು.
ಸಾರ್ವಜನಿಕರ, ಕುಟುಂಬಸ್ಥರಿಂದ ಆಕ್ರೋಶ: ‘ಬಾಲಕನನ್ನು ಈವರೆಗೆ ಅಧಿಕಾರಿಗಳು ಪತ್ತೆಹಚ್ಚುವ ಕೆಲಸ ಮಾಡಿಲ್ಲ. ನಗರಸಭೆ ಪೌರಾಯುಕ್ತರು, ಸದಸ್ಯರು, ತಹಶೀಲ್ದಾರ್‌ಗೆ ಕುಟುಂಬಸ್ಥರ ನೋವು ಗೊತ್ತಾಗುತ್ತಿಲ್ಲ. ಈ ವಿಷಯದಲ್ಲಿ ಎಲ್ಲರೂ ಕಾಲಹರಣ ಮಾಡುತ್ತಿದ್ದಾರೆ’ ಸಾರ್ವಜನಿಕರು, ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ತಹಶೀಲ್ದಾರ್ ಯು.ನಾಗರಾಜ, ನಗರಸಭೆ ಅಧ್ಯಕ್ಷೆ ಹೀರಾಬಾಯಿ, ರಮೇಶ ಚೌಡ್ಕಿ, ವಾಸುದೇವ ನವಲಿ, ಎಂ.ಡಿ.ಉಸ್ಮಾನ್, ಉಮೇಶ ಸಿಂಗನಾಳ, ಸದಸ್ಯ ಮನೋಹರಸ್ವಾಮಿ ಹಿರೇಮಠ, ಪರಶುರಾಮ ಮಡ್ಡೇರ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಜಿ.ಪಂ ಮಾಜಿ ಸದಸ್ಯ ಅಮರೇಶ ಗೋನಾಳ ಉಪಸ್ಥಿತರಿದ್ದರು.
‘ಕಸಾಪ ರಾಜ್ಯ ಘಟಕದ ಹಣಕಾಸು ಅವ್ಯವಹಾರದ ಬಗ್ಗೆ ಕೆಲ ಸದಸ್ಯರು ಸಾಹಿತಿಗಳು ದೂರು ನೀಡಿದ್ದು ಸಹಕಾರಿ ನಿಯಮಾವಳಿಯಂತೆ ತನಿಖೆಗೆ ಸೂಚನೆ ನೀಡಿ ತನಿಖಾಧಿಕಾರಿ ನೇಮಿಸಲಾಗಿದೆ. ವರದಿ ಬಂದ ನಂತರ ಕ್ರಮಕ್ಕೆ ಮುಂದಾಗಲಾಗುತ್ತದೆ’ ಎಂದು ಸಚಿವ ತಂಗಡಗಿ ಹೇಳಿದರು. ‘ನಿಗಮ ಮಂಡಳಿ ಅಧ್ಯಕ್ಷರ ದಿಢೀರ್ ಬದಲಾವಣೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ನಾನು ವಿಚಾರಕ್ಕೆ ಪ್ರತಿಕ್ರಿಯೆ ನೀಡಲಾರೆ. ಕೊಪ್ಪಳದ ಹೊಸ ಕಾರ್ಖಾನೆಯಿಂದ ಹಣ ಪಡೆದಿರುವ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಬಾಲಿಶತನದಿಂದ ಕೂಡಿದ್ದು ಸುಖಾಸುಮ್ಮನೆ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಈ ವಿಷಯ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.