ADVERTISEMENT

ಕೊಪ್ಪಳ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

ವಾಕಿಂಗ್‌, ಯೋಗ ಮಾಡಲು ತೊಂದರೆ: ಉದ್ಯಾನ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 6:17 IST
Last Updated 15 ಜೂನ್ 2025, 6:17 IST
ಉದ್ಯಾನದ ನಿರ್ವಹಣೆ ಇಲ್ಲದ ಕಾರಣ ಕಸ ಕಡ್ಡಿ ಬೆಳೆದಿರುವುದು
ಉದ್ಯಾನದ ನಿರ್ವಹಣೆ ಇಲ್ಲದ ಕಾರಣ ಕಸ ಕಡ್ಡಿ ಬೆಳೆದಿರುವುದು   

ಕನಕಗಿರಿ: ವಿಧಾನಸಭಾ ಕ್ಷೇತ್ರ ಹಾಗೂ ದೇವಾಲಯಗಳ ನಗರಿ ಎಂದು ಖ್ಯಾತಿ ಗಳಿಸಿರುವ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. 2011ರ ಜನ ಗಣತಿ ಪ್ರಕಾರ ಪಟ್ಟಣದಲ್ಲಿ 16,900 ಜನಸಂಖ್ಯೆ ಇದ್ದು, ಈಗ ಅಂದಾಜು 20 ಸಾವಿರ ಇದೆ ಎಂದು ಪಟ್ಟಣ ಪಂಚಾಯಿತಿ ಮೂಲಗಳು ತಿಳಿಸುತ್ತಿವೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎನ್ಎ ಹಾಗೂ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಲೇಔಟ್‌ಗಳಲ್ಲಿ 37 ನಿವೇಶನಗಳನ್ನು ಉದ್ಯಾನ ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಐದು ಉದ್ಯಾನಗಳನ್ನು ಅಭಿವೃದ್ಧಿಗೊಳಿಸಲು ಕೈಗೆತ್ತಿಕೊಂಡಿದ್ದರೂ ನಿರ್ವಹಣೆ‌ ಇಲ್ಲದೆ ಅವುಗಳು ಸೊರಗಿರುವುದು ಕಂಡು ಬರುತ್ತಿವೆ.

ಉದ್ಯಾನದಲ್ಲಿ ವಾಕಿಂಗ್ ಪಥ, ಕುಡಿಯುವ ನೀರು, ಆಸನಗಳು, ಆಲಂಕಾರಿಕ ಸಸಿಗಳು, ಮಕ್ಕಳ ಮನರಂಜನೆ ಚಟುವಟಿಕೆಗಳ ಸಲಕರಣೆಗಳು ಸೇರಿದಂತೆ ಹೊರಗೋಡೆ, ಸೌಲಭ್ಯ ಇರಬೇಕು. ಅಲ್ಲದೆ ವಿವಿಧ ಸಸಿಗಳನ್ನು ನೆಟ್ಟು ಬೆಳಸಿ ನೆರಳಿನ ವ್ಯವಸ್ಥೆ ಮಾಡಬೇಕು. ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವ ಕೆಲಸವನ್ನು ಪಟ್ಟಣ ಪಂಚಾಯಿತಿ ವತಿಯಿಂದ ಮಾಡಲಾಗುತ್ತಿದೆ.

ADVERTISEMENT

ತೊಂಡೆತೇವರಪ್ಪ ದೇಗುಲದ ಆವರಣ, ಸಮುದಾಯ ಆರೋಗ್ಯ ಕೇಂದ್ರದ ಪರಿಸರ ಹಾಗೂ ಮೆಹಬೂಬ‌ನಗರ, ಗಿಡ್ಡ ಆಂಜನೇಯ ದೇಗುಲ, ತೊಂಡೆತೇವರಪ್ಪನ ರಸ್ತೆ ಸೇರಿ ಒಟ್ಟು ಐದು ಕಡೆ ಉದ್ಯಾನಗಳಿವೆ.

ತೊಂಡೆತೇವರಪ್ಪನ ದೇವಸ್ಥಾನದ ರಸ್ತೆಯಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟಿಕೆ ಸಲಕರಣೆ ಕೆಟ್ಟು‌ ನಿಂತಿವೆ. ಕಸ ಕಡ್ಡಿ ಬೆಳೆದು ವಾಕಿಂಗ್‌ಗೆ ಸಮಸ್ಯೆ ಆಗಿದೆ. ವಾಕಿಂಗ್ ಪಥವನ್ನು ಸರಿಯಾಗಿ ನಿರ್ಮಾಣ ಮಾಡದ ಕಾರಣ ಜನರು ಇಲ್ಲಿ ಬರುವುದು ಅಪರೂಪವಾಗಿದೆ. ಆಸನಗಳ ವ್ಯವಸ್ಥೆ ಮಾಡಿದ್ದು ಅದರ ಸುತ್ತಲೂ ಕಸಕಡ್ಡಿ ಬೆಳೆದು‌ ನಿಂತಿರುವುದರಿಂದ ಕ್ರಿಮಿಕೀಟಗಳ ಭಯ ಆವರಿಸಿದೆ. ಇಲ್ಲಿ ಕುಡಿಯುವ ನೀರು ಸಹ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಇನ್ನು ತೊಂಡೆತೇವರಪ್ಪ ದೇಗುಲದ ಉದ್ಯಾನದಲ್ಲಿ ವಾಕಿಂಗ್ ಪಥವೇ ನಾಪತ್ತೆಯಾಗಿದೆ. ಆಸ್ಪತ್ರೆ ಪರಿಸರದಲ್ಲಿರುವ ಉದ್ಯಾನದ ಅಭಿವೃದ್ಧಿಗೆ ಗ್ರಹಣ ಹಿಡಿದಿದ್ದು ಯಾವ ಸೌಲಭ್ಯಗಳು ಕಾಣಿಸುತ್ತಿಲ್ಲ. ಗಿಡ್ಡ ಆಂಜನೇಯ ದೇವಸ್ಥಾನವನ್ನು ಒಳಗೊಂಡಿರುವ ಉದ್ಯಾನದಲ್ಲಿ ಭಕ್ತರು ಓಡಾಟ ಇರುವ ಕಾರಣ ಸ್ವಲ್ಪ ಸ್ವಚ್ಛತೆ ಕಾಣಲು ಸಾಧ್ಯವಾಗಿದೆ. ಅನುದಾನಕ್ಕೆ ತಕ್ಕಂತೆ ಕೆಲಸವಾಗಿಲ್ಲ ಎಂಬುದು ಸ್ಥಳೀಯರ ದೂರು.

ಪಟ್ಟಣದಲ್ಲಿ ವಾಕಿಂಗ್, ಯೋಗ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉದ್ಯಾನದಲ್ಲಿ ವಾಕಿಂಗ್ ಪಥ ಸರಿಯಾಗಿದ್ದರೆ ಮಹಿಳೆಯರು, ಮಕ್ಕಳಿಗೆ ಅನುಕೂಲವಾಗುತ್ತದೆ. ಎಲ್ಲಿಯೂ ಉತ್ತಮ ವ್ಯವಸ್ಥೆ ಇಲ್ಲ ಹೀಗಾಗಿ ವೃದ್ಧರು, ಮಕ್ಕಳು, ಯುವಕರು ವಾಕಿಂಗ್, ಯೋಗಾಸನಕ್ಕಾಗಿ ಪಾರ್ಕ್ ಕಡೆಗೆ ಬರದೆ ಮನೆಯಲ್ಲಿ ಮಾಡುತ್ತಿದ್ದಾರೆ.

ಬಡಾವಣೆ ರಸ್ತೆ, ಹೆದ್ದಾರಿಗಳೇ ಗತಿ: ಪಟ್ಟಣದಲ್ಲಿ ಸುಸಜ್ಜಿತವಾದ ಉದ್ಯಾನ ಇಲ್ಲದ ಪರಿಣಾಮ ಸಾಕಷ್ಟು ಜನರು ಗಂಗಾವತಿ- ಲಿಂಗಸೂರು ರಸ್ತೆ, ಕನಕಗಿರಿ-ಕೊಪ್ಪಳ, ಬಸರಿಹಾಳ, ಬೈಲಕ್ಕುಂಪುರ ಹೀಗೆ ವಿವಿಧ ಗ್ರಾಮಗಳ ರಸ್ತೆಗಳಲ್ಲಿ ವಾಕಿಂಗ್ ಮಾಡುವಂತಾಗಿದೆ. ಈ ರಸ್ತೆಗಳಲ್ಲಿ ದಿನ ನಿತ್ಯವೂ ಟ್ರ್ಯಾಕ್ಟರ್‌, ಲಾರಿ, ಬಸ್, ಇತರೆ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿ ವಾಕಿಂಗ್ ಮುಗಿಸಿ ಪಕ್ಕದ ಲೇಔಟ್‌ಗಳಲ್ಲಿ ಅಶ್ರಯ ಪಡೆಯುವಂತಾಗಿದೆ ಎಂದು ಉಮೇಶ, ಪರಶುರಾಮ, ಹನುಮೇಶ, ಇತರರು ತಿಳಿಸಿದರು.

ಅನುದಾನ ಲೂಟಿ ದೂರು: ಉದ್ಯಾನದ ಅಭಿವೃದ್ಧಿ ಹೆಸರಿನಲ್ಲಿ ಸೌಲಭ್ಯಗಳನ್ನು ನೀಡದೆ ಸರ್ಕಾರದ ಅನುದಾನವನ್ನು ಲೂಟಿ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಕನಕಗಿರಿಯ ತೊಂಡೆತೇವರಪ್ಪ ದೇವಸ್ಥಾನದ ರಸ್ತೆಯಲ್ಲಿರುವ ಉದ್ಯಾನದಲ್ಲಿ ಜೋಕಾಲಿ ಮುರಿದಿರುವುದು     
ಪಟ್ಟಣದಲ್ಲಿ ಒಟ್ಟು 37 ನಿವೇಶನಗಳು ಉದ್ಯಾನಕ್ಕೆ ಮೀಸಲಾಗಿದ್ದು ಮುಂದಿನ‌ ದಿನಗಳಲ್ಲಿ ರಾಜ್ಯ ಹಣಕಾಸು ಆಯೋಗ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು.
– ದತ್ತಾತ್ರೇಯ ಹೆಗ್ಡೆ, ಮುಖ್ಯಾಧಿಕಾರಿ ಪ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.