ಲಕ್ಷ್ಮೇಶ್ವರ: ಕೊಪ್ಪಳದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗವಿಸಿದ್ದಪ್ಪ ನಾಯಕ ಅವರನ್ನು ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ತಾಲ್ಲೂಕು ವಾಲ್ಮೀಕಿ ಸಮಾಜ ಅಧ್ಯಕ್ಷ ಭೀಮಣ್ಣ ಯಂಗಾಡಿ ಆಗ್ರಹಿಸಿದರು.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ಗವಿಸಿದ್ದಪ್ಪ ನಾಯಕ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಗವಿಸಿದ್ದಪ್ಪ ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಹಾಗೂ ಎರಡು ಎಕರೆ ಹೊಲ ನೀಡಬೇಕು’ ಎಂದು ಒತ್ತಾಯಿಸಿದರು.
ನಾಗರಾಜ ಹಾವಳಕೇರಿ ಮಾತನಾಡಿ, ‘ಈ ಹಿಂದೆ ಸಚಿವರಾದ ಬಿ. ನಾಗೇಂದ್ರ ಹಾಗೂ ಸಚಿವ ಕೆ.ಎನ್. ರಾಜಣ್ಣ ಪರಿಶಿಷ್ಟ ಪಂಗಡದ ಮುಖಂಡರಾಗಿದ್ದು, ಅವರನ್ನು ರಾಜಕೀಯದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಸಂಪುಟದಿಂದ ತೆಗೆದು ಹಾಕಲಾಗಿದೆ. ನಮ್ಮ ನಾಯಕರ ವಿರುದ್ಧ ಇದೇ ರೀತಿಯ ಕ್ರಮ ಮುಂದುವರೆದರೆ ಮುಂಬರುವ ಚುನಾವಣೆಗಳಲ್ಲಿ ಸಮಾಜ ವತಿಯಿಂದ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಆರೋಪಿಸಿದರು.
ಹನಮಂತಪ್ಪ ಜಾಲಿಮರದ, ಚಂದ್ರು ತಳವಾರ, ಪ್ರಕಾಶ ಬೆಂತೂರ, ಕೆ.ಒ. ಹೂಲಿಕಟ್ಟಿ, ಶಿವರಾಜ ಮಲ್ಲಾಪುರ, ಶಿವರಾಜ ಪೂಜಾರ, ರಮೇಶ ದೊಡ್ಡಮನಿ, ಪವನ ಅರಳಿ, ಪ್ರವೀಣ ಇಟಗಿ, ಶಿವಕುಮಾರ ಗೊಲ್ಲರ, ಅರುಣ ಬೆಟಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.