ADVERTISEMENT

ಸರ್ಕಾರಿ ಶಾಲೆಗೆ ಭೂಮಿ ನೀಡಿದ ಗವಿಶ್ರೀ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:44 IST
Last Updated 1 ಏಪ್ರಿಲ್ 2025, 14:44 IST
ಕುಕನೂರು ತಾಲ್ಲೂಕಿನ ಭಾನಾಪೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗವಿಮಠದ ಗವಿಶ್ರೀಗಳು ಗವಿಮಠದ ಭೂಮಿಯನ್ನೂ ರುಜು ಮಾಡಿ ನೀಡಿದರು
ಕುಕನೂರು ತಾಲ್ಲೂಕಿನ ಭಾನಾಪೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗವಿಮಠದ ಗವಿಶ್ರೀಗಳು ಗವಿಮಠದ ಭೂಮಿಯನ್ನೂ ರುಜು ಮಾಡಿ ನೀಡಿದರು   

ಕುಕನೂರು: ತಾಲ್ಲೂಕಿನ ಭಾನಾಪೂರ ಗ್ರಾಮದಲ್ಲಿರುವ ಗವಿಮಠದ ಭೂಮಿಯನ್ನು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಅದೇ ಗ್ರಾಮದ ಸರ್ಕಾರಿ ಶಾಲೆಗೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನೀಡಿದ್ದಾರೆ.

ಭಾನಾಪೂರ ಗ್ರಾಮದಲ್ಲಿ ಗವಿಮಠಕ್ಕೆ ಸೇರಿದ 68 ಎಕರೆ ಭೂಮಿಯ ಪೈಕಿ ಶ್ರೀಗಳು 2016ರಲ್ಲಿ 2.6 ಗುಂಟೆ ಜಾಗವನ್ನು ಸರ್ಕಾರಿ ಪ್ರೌಢಶಾಲೆಗೆ ಮೌಖಿಕವಾಗಿ ದಾನ ನೀಡಿದ್ದರು. ಅದನ್ನು ಸಹ ಸರ್ಕಾರದ ಹೆಸರಿಗೆ ಭೂದಾನ ಮಾಡಿ ದಾಖಲೆಗೆ ಸಹಿ ನೀಡಿದ್ದಾರೆ. ಹಾಗೆಯೇ ಗ್ರಾಮದಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ₹ 3 ಕೋಟಿ ವೆಚ್ಚದಲ್ಲಿ ಬುದ್ಧ, ಬಸವ, ಅಂಬೇಡ್ಕರ ಭವನ ಮಂಜೂರು ಮಾಡಿಸಿದ್ದರು. ಅದನ್ನು ನಿರ್ಮಿಸಲು ಭೂಮಿ ಇಲ್ಲದ ಕಾರಣ ಶ್ರೀಗಳನ್ನು ಭಾನಾಪೂರದಲ್ಲಿರುವ ಮಠದ ಜಾಗದಲ್ಲಿ ನಿರ್ಮಿಸಲು ಕೇಳಿದಾಗ, ಅದಕ್ಕೂ ಸಹ ಒಪ್ಪಿಗೆ ಸೂಚಿಸಿ ಎರಡು ದಿನಗಳ ಹಿಂದೆ 27 ಗುಂಟೆ ಭೂಮಿ ನೀಡಿದ್ದಾರೆ.

ಶನಿವಾರ ಗ್ರಾಮಸ್ಥರ ಸಮ್ಮುಖದಲ್ಲಿ ಗವಿಮಠದಲ್ಲಿ ಸರ್ಕಾರದ ಹೆಸರಿಗೆ ರುಜು ಮಾಡುವ ಮೂಲಕ ಗವಿಶ್ರೀ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ.

ADVERTISEMENT

‘ನಮ್ಮೂರಿನ ಸರ್ಕಾರಿ ಪ್ರೌಢಶಾಲೆಗೆ ಹಾಗು ಬುದ್ಧ, ಬಸವ, ಅಂಬೇಡ್ಕರ್ ಭವನಕ್ಕೆ ಸುಮಾರು 3 ಎಕರೆಯಷ್ಟು ಭೂಮಿಯನ್ನು ಗವಿಶ್ರೀ ನೀಡಿದ್ದಾರೆ. ಇದರಿಂದ ಭವನದ ನಿರ್ಮಾಣದಿಂದ ಗ್ರಾಮಕ್ಕಾಗುವ ಅಭಿವೃದ್ಧಿಗೆ ಶ್ರೀಗಳು ಆಶೀರ್ವಸಿದ್ದಾರೆ. ಶ್ರೀಗಳ ಈ ಅಮೋಘ ಕಾರ್ಯಕ್ಕೆ ಬೆಲೆ ಕಟ್ಟಲಾಗದು’ ಎಂದು ಭಾನಾಪೂರ ಗ್ರಾಮಸ್ಥ ಚಂದ್ರಶೇಖರಯ್ಯ ಹಿರೇಮಠ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗವೇಣಿ, ತಾಲ್ಲೂಕು ಅಧಿಕಾರಿ ಶಿವಂಶಕರ, ಚಂದ್ರಶೇಖರಯ್ಯ ಹಿರೇಮಠ, ಶಶಿಧರಯ್ಯ ಹಿರೇಮಠ, ನಿಂಗನಗೌಡ, ಆನಂದ ಲಕ್ಮಾಪೂರ, ಶಂಕ್ರಪ್ಪ ಚೌಡ್ಕಿ, ಬಸವರಾಜ ಮಠದ, ಕಲ್ಯಾಣಪ್ಪ ಕುಂಬಾರ, ಜಿಲ್ಲಾ ಹಾಗೂ ತಾಲ್ಲೂಕು ನೋಂದಣಾಧಿಕಾರಿಗಳು ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.