ಕೊಪ್ಪಳ: ‘ಗವಿಸಿದ್ದಪ್ಪ ನಾಯಕ ಹತ್ಯೆಯಾಗಿದ್ದು ದುರಂತ. ರಾಜ್ಯ ಸರ್ಕಾರ ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು’ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಒತ್ತಾಯಿಸಿದರು.
ಇಲ್ಲಿನ ಕುರುಬರ ಓಣಿಯಲ್ಲಿರುವ ಗವಿಸಿದ್ದಪ್ಪ ನಾಯಕ ಅವರ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಗವಿಸಿದ್ದಪ್ಪ ಅವರ ಕುಟುಂಬದವರ ಪರಿಸ್ಥಿತಿ ನೋಡಿ ನೋವಾಗಿದೆ. ಇಂಥ ಸ್ಥಿತಿ ಯಾರಿಗೂ ಬರಬಾರದು. ಸದನದಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ನಾಯಕ ಅವರ ಕುಟುಂಬಕ್ಕೆ ಸರ್ಕಾರ ಜಮೀನು ಮತ್ತು ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಮಾಜಿ ಸಚಿವ ವೆಂಟಕರಾವ್ ನಾಡಗೌಡ ಮಾತನಾಡಿ ‘ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಇಲ್ಲ. ನ್ಯಾಯಾಲಯವೂ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸಲಿದೆ. ಈ ಕುರಿತು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ’ ಎಂದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ರಮೇಶ ಡಂಬ್ರಳ್ಳಿ, ಸೋಮನಗೌಡ ಹೊಗರನಾಳ, ಮಂಜುನಾಥ ಸೊರಟೂರ ಇತರರಿದ್ದರು. ಇದಕ್ಕೂ ಮೊದಲು ಜೆಡಿಎಸ್ ಪಕ್ಷದ ನಾಯಕರು ಪಕ್ಷದ ಕಚೇರಿಗೆ ಭೇಟಿ ನೀಡಿ ಬಳಿಕ ಗವಿಮಠಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.