ADVERTISEMENT

ಸಾಮಾನ್ಯ ಸಭೆ ಕಡತ ಪುಸ್ತಕ ಕಾಣೆ: ನಗರಸಭೆ ಅಧ್ಯಕ್ಷೆ ಆರೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:26 IST
Last Updated 26 ನವೆಂಬರ್ 2022, 5:26 IST
ಮಾಲಾಶ್ರೀ ಸಂದೀಪ
ಮಾಲಾಶ್ರೀ ಸಂದೀಪ   

ಗಂಗಾವತಿ: ‘ಕಳೆದ ತಿಂಗಳು ನಗರಸಭೆ ಸಾಮಾನ್ಯ ಸಭೆಯ ಕಡತಕ್ಕೆ ಸಹಿಮಾಡಿ ನೀಡಿದ ಫೈಲ್‌ ಅನ್ನು ಅಧಿಕಾರಿಗಳು ಕಳೆದು ಹೋಗಿದೆ ಎನ್ನುತ್ತಿದ್ದಾರೆ’ ಎಂದು ನಗರಸಭೆ ಅಧ್ಯಕ್ಷೆ ಮಾಲಾಶ್ರೀಸಂದೀಪ ಆರೋಪಿಸಿದ್ದಾರೆ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಹಿ ಮಾಡಿ, ಠರಾವಿಗೆ ಜಿಲ್ಲಾಧಿಕಾರಿಗೆ ಕಳಿಸುವಂತೆ ಕ್ಲರ್ಕ್ ಸಾಧಿಕ್ ಅವರಿಗೆ ನೀಡಲಾಗಿತ್ತು. ಇದೀಗ ದಾಖಲೆಯೇ ಕಳೆದು ಹೋಗಿದೆ ಎನ್ನುತ್ತಿದ್ದಾರೆ. ಸಾಧಿಕ್ ಅವರನ್ನು ಕೇಳಿದರೆ ಪೌರಾಯುಕ್ತರಿಗೆ ನೀಡಿದ್ದೇನೆ ಎನ್ನುತ್ತಾರೆ. ಪೌರಾಯುಕ್ತರು ನನಗೆ ತಲುಪಿಲ್ಲ ಎಂದು ಹೇಳುತ್ತಾರೆ. ನಿಜವಾಗಿ ಕಡತ ಕಳೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕಳೆದ ಬಾರಿ ಅಮೃತನಗರ ಯೋಜನೆಯಡಿ ₹1.30 ಕೋಟಿ ಕಾಮಗಾರಿ ಬಿಲ್ ಅಧ್ಯಕ್ಷರ ಸಹಿ ಇಲ್ಲದೆ ಪಾಸ್ ಆಗಿದ್ದು, ಅದರ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಿಲ್ಲ. ಒಂದು ವಾರದ ನಂತರ ಬಿಲ್ ಪಾಸಾದ ಮಾಹಿತಿ ತಿಳಿದಿದೆ’ ಎಂದು ದಾಖಲೆ ತೋರಿಸಿದರು.

ADVERTISEMENT

‘ದಾಖಲೆಗಳನ್ನು ಪರಿಶೀಲಿಸಲು ಕಾನೂನು ಪ್ರಕಾರ ಒಂದು ತಿಂಗಳು ಅವಕಾಶವಿದ್ದು, ನಗರಸಭೆ ಕಡತಗಳನ್ನು ಯಾವತ್ತು ತಿಂಗಳು ಮೀರಿ ಇಟ್ಟುಕೊಂಡಿಲ್ಲ’ ಎಂದರು.

‘ನ.28ಕ್ಕೆ ಉದ್ಘಾಟನೆಯಾಗಲಿರುವ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ. ಇದೀಗ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದು, ಕಳಪೆ ಗುಣಮಟ್ಟದ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಏಕಾಏಕಿ ಉದ್ಘಾಟನೆ ದಿನಾಂಕ ತಿಳಿಸಿದಾಗ ನಾನೇನೂ ಮಾಡಲಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.