ADVERTISEMENT

ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿ ನೀಡಿ: ಪ್ರೊ.ಪ್ರಭುರಾಜ ನಾಯಕ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:30 IST
Last Updated 20 ಅಕ್ಟೋಬರ್ 2021, 16:30 IST
ಕನಕಗಿರಿ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಬಸವರಾಜ ದಢೇಸೂಗೂರು ಉದ್ಘಾಟಿಸಿದರು
ಕನಕಗಿರಿ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಬಸವರಾಜ ದಢೇಸೂಗೂರು ಉದ್ಘಾಟಿಸಿದರು   

ಕನಕಗಿರಿ: ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಾಲ್ಮೀಕಿ ಸಮಾಜಕ್ಕೆ ಈಗ ಸಿಗುತ್ತಿರುವ ಶೇ 3 ರಷ್ಟು ಮೀಸಲಾತಿ ಸೌಲಭ್ಯ ಯಾವುದೇ ರೀತಿಯಲ್ಲಿ ಉಪಯೋಗವಾಗಿಲ್ಲ ಎಂದು ಸಹಾಯಕ ಪ್ರಾಧ್ಯಾಪಕ ಪ್ರಭುರಾಜ ನಾಯಕ ತಿಳಿಸಿದರು.

ತಾಲ್ಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಇಲ್ಲಿನ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ವಾಲ್ಮೀಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ 7. 5ರಷ್ಟು ಮೀಸಲಾತಿ ನೀಡಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ಇಲ್ಲದಿದ್ದರೆ ಬಡತನ, ನಿರುದ್ಯೋಗ, ಅನಕ್ಷರತೆ ಸೇರಿದಂತೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ADVERTISEMENT

ಶಿಕ್ಷಣ ಪಡೆಯುವ ಮೂಲಕ ನಾಯಕ ಸಮಾಜದವರು ಸಮುದಾಯ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯಮಶೀಲರಾಗಿ ಆರ್ಥಿಕವಾಗಿ ಸಬಲರಾಗಬೇಕು. ಸಮಾಜದಲ್ಲಿ ಆರ್ಥಿಕವಾಗಿ ಮುಂದುವರೆದವರು ಸಹಕಾರಿ ಬ್ಯಾಂಕ್ ಸ್ಥಾಪಿಸಿ ಸಮಾಜದ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡಬೇಕು ಎಂದು ಹೇಳಿದರು.

ಸರ್ಕಾರಗಳು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಒತ್ತು ನೀಡಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಸಮಾಜದ ಬಹು ಬೇಡಿಕೆಯಾದ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ 7.5 ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಆದ್ಯತೆ ನೀಡಿದೆ, ತಾವು ಸಹ ಬೇಡಿಕೆ ಹೆಚ್ಚಳದ ಪರವಾಗಿರುವೆ ಎಂದರು.
ಮೀಸಲಾತಿ ಪ್ರಮಾಣ ಹೆಚ್ಚಳ ಕೆಲಸ ಕೆಲ ತಾಂತ್ರಿಕ ಕಾರಣಗಳಿಂದ ನೆನಗುದಿಗೆ ಬಿದ್ದಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೇಡಿಕೆ ಈಡೇರಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಚಳುವಳಿಗೆ ನಾಯಕ ಸಮಾಜದ ಕೊಡುಗೆ ಅಪಾರವಾಗಿದೆ. ಜಯಂತಿಗಳ ಆಚರಣೆ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ಸಿಗಬೇಕು ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲಿಗೆ ವಾಲ್ಮೀಕಿ, ಕನಕದಾಸ ಜಯಂತಿ ಆರಂಭಿಸಿದ್ದಾರೆ ಎಂದು ತಿಳಿಸಿದರು.

ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ಕೆಡಿಪಿ ಸದಸ್ಯ ಗುರುಮೂರ್ತಿಗೌಡ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಶರಣಪ್ಪ ಸೋಮಸಾಗರ, ಸಿಪಿಐ ಉದಯರವಿ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ನಾಗರಾಜ ಬಿಲ್ಗಾರ, ವಾಗೀಶ ಹಿರೇಮಠ, ಗ್ಯಾನಪ್ಪ ಗಾಣದಾಳ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ನವೋದಯ ವಸತಿ ಶಾಲೆಗೆ ಆಯ್ಕೆಯಾದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು.

ಸಮಾಜದ ಗುರುಗಳಾದ ರಾಜಾ ನವೀನ ಚಂದ್ರ ನಾಯಕ ಸಾನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ,ಮೇಲ್ವಿಚಾರಕ ರಮೇಶ ನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಪ್ಪಣ್ಣ ಗಿಡ್ಡಿ, ಭೀಮನಗೌಡ ಹೊಸ್ಗೇರಾ,
ತಾ.ಪಂ.ಮಾಜಿ ಅಧ್ಯಕ್ಷ ಬಸಂತಗೌಡ, ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ಪ್ರಮುಖರಾದ ನಾಗರಾಜ ತಂಗಡಗಿ, ಯಂಕಪ್ಪ ತೆಗ್ಗಿಹಾಳ, ನಾಗೇಶಪ್ಪ ,ರಾಮನಗೌಡ, ರಂಗಪ್ಪ ಇದ್ದರು. ರಾಮು ಆಗೋಲಿ ಸ್ವಾಗತಿಸಿದರು. ಮಂಜುಳಾ ಶ್ಯಾವಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.