ADVERTISEMENT

ಸ್ಥಳೀಯರಿಗೆ ಉದ್ಯೋಗ ನೀಡಿ

ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಸಚಿವ ಜಗದೀಶ್‌ ಶೆಟ್ಟರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 13:11 IST
Last Updated 18 ಜೂನ್ 2020, 13:11 IST
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಕೈಗಾರಿಕೆ ಉದ್ಯಮಿಗಳೊಂದಿಗೆ ಸಭೆ ನಡೆಸಿದರು 
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಕೈಗಾರಿಕೆ ಉದ್ಯಮಿಗಳೊಂದಿಗೆ ಸಭೆ ನಡೆಸಿದರು    

ಕೊಪ್ಪಳ: ಜಿಲ್ಲೆಯಲ್ಲಿ ರೈತರಿಂದ ಜಮೀನು ಪಡೆದ ಕಾರ್ಖಾನೆಗಳು ಭೂಮಿ ಕೊಟ್ಟ ರೈತನ ಕುಟುಂಬದ ಸದಸ್ಯನಿಗೆ ಕಾರ್ಖಾನೆಗಳಲ್ಲಿ ಉದ್ಯೋಗವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಕೈಗಾರಿಕೋದ್ಯಮಗಳಿಗೆ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕೌಶಲ ಆಧಾರಿತ ಮತ್ತು ಕೌಶಲ ರಹಿತ ಉದ್ಯೋಗಗಳಲ್ಲಿ ಸ್ಥಳೀಯರ ನಂತರ ಬೇರೆ ರಾಜ್ಯ, ಜಿಲ್ಲೆಯವರಿಗೆ ಉದ್ಯೋಗ ನೀಡಬೇಕು. ಬಹುತೇಕ ಕಾರ್ಖಾನೆಗಳಲ್ಲಿ ಖಾಯಂಗಿಂತ ಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಉದ್ಯೋಗ ನೀಡಲಾಗುತ್ತಿದೆ. ಈ ಪದ್ಧತಿಯನ್ನು ಬಿಟ್ಟು, ಸಾಧ್ಯವಾದಷ್ಟು ಮಟ್ಟಿಗೆ ಖಾಯಂ ಉದ್ಯೋಗ ನೀಡಲು ಕ್ರಮ ವಹಿಸಬೇಕು. ಜಿಲ್ಲೆಯ ಎಲ್ಲಾ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ನೀಡಿರುವ ಉದ್ಯೋಗಾವಕಾಶಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ವರದಿ ನೀಡಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 559 ಕೈಗಾರಿಕಾ ಘಟಕಗಳು ನೋಂದಣಿಯಾಗಿದ್ದು, ಇದುವರೆಗೂ ಒಟ್ಟು 8,529 ಕೈಗಾರಿಕೆಗಳು ನೋಂದಣಿಯಾಗಿವೆ. ಅದರಲ್ಲಿ 19 ಭಾರೀ ಕೈಗಾರಿಕೆಗಳು, 8 ಮಧ್ಯಮ ಕೈಗಾರಿಕೆಗಳು ಸ್ಥಾಪಿತವಾಗಿವೆ. ಇಲ್ಲಿಯವರೆಗೆ ಒಟ್ಟು 10 ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಸ್ಥಗಿತಗೊಂಡ ಕಾರ್ಖಾನೆಗಳು ಚಟುವಟಿಕೆ ನಿಲ್ಲಿಸಲು ಕಾರಣಗಳು, ಬಳಸಿಕೊಂಡ ಸ್ಥಳ, ಬಳಕೆಯಾಗದೆ ಬಾಕಿ ಉಳಿದ ಸ್ಥಳ ಮತ್ತು ಪ್ರಸ್ತುತ ಆ ಕಾರ್ಖಾನೆಗಳ ವಸ್ತುಸ್ಥಿತಿಯನ್ನು ಕುರಿತು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ 104.10 ಎಕರೆ ಭುಮಿಯನ್ನು ಕೈಗಾರಿಕಾ ವಸಾಹತುವಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲಿನ ನಿವೇಶನ ದರ ಮತ್ತು ಸರ್ಕಾರದ ನಿಯಮಾವಳಿಗಳ ಕುರಿತು ಪತ್ರಿಕೆಗಳಲ್ಲಿ ಪ್ರಕಟಣೆ ಮೂಲಕ ಸೂಕ್ತ ಪ್ರಚಾರ ಕೈಗೊಂಡು ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಿ. ಕುಷ್ಟಗಿ ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮದ 272 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೆಶಕ್ಕಾಗಿ ಭೂಸ್ವಾದೀನ ಪ್ರಕ್ರಿಯೆ ಆರಂಭವಾಗಿ 3 ವರ್ಷಗಳಾಗುತ್ತಾ ಬಂದಿದ್ದು, ವಿಳಂಬ ಮಾಡದೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ.

ಯಾವುದೇ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿ ಮಾಡಬೇಕಾದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಕೈಗಾರಿಕೆಗಳ ಅಗತ್ಯ, ಬೇಡಿಕೆ, ಸೌಲಭ್ಯಗಳನ್ನು ಪರಿಶೀಲಿಸಿ ನಂತರ ಭೂ ಖರೀದಿಗೆ ಮುಂದಾಗಿ. ಭೂಸ್ವಾಧೀನ ಪ್ರಕ್ರಿಯೆಯು ವಿಳಂಬವಾಗುವುದರಿಂದ ಇತರೆ ಅಭಿವೃದ್ಧಿ ಕಾರ್ಯಗಳೂ ವಿಳಂಬವಾಗುತ್ತವೆ ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಬಳಿಕ ಕೈಗಾರಿಕೊದ್ಯಮಿಗಳ ಸಮಸ್ಯೆಗಳ ಕುರಿತು ಚರ್ಚಿಸಿದರು.ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಕೆ.ಎಸ್.ಎಸ್.ಐ.ಡಿ.ಸಿ ಮುಖ್ಯ ಇಂಜಿನಿಯರ್ ಜಗದೀಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.