ADVERTISEMENT

ಕನ್ನಡಕ್ಕೆ ಆದ್ಯತೆ ನೀಡಿ: ಮಂಜಮ್ಮ ಸಲಹೆ

ಕನ್ನಡ ರೊಟ್ಟಿ, ಮುದ್ದೆ; ಇಂಗ್ಲಿಷ್ ಉಪ್ಪಿನ ಕಾಯಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:25 IST
Last Updated 28 ಡಿಸೆಂಬರ್ 2019, 10:25 IST
ಕನಕಗಿರಿಯ ಉಪನ್ಯಾಸಕ ಇಮಾಮಸಾಹೇಬ್ ಹಡಗಲಿ ಅವರ ಅನುವಾದಿತ ಕೃತಿ ಮಿರ್ಜಾ ಗಾಲಿಬ್‌ ಅನ್ನು ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಶುಕ್ರವಾರ ಬಿಡುಗಡೆ ಮಾಡಿದರು
ಕನಕಗಿರಿಯ ಉಪನ್ಯಾಸಕ ಇಮಾಮಸಾಹೇಬ್ ಹಡಗಲಿ ಅವರ ಅನುವಾದಿತ ಕೃತಿ ಮಿರ್ಜಾ ಗಾಲಿಬ್‌ ಅನ್ನು ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಶುಕ್ರವಾರ ಬಿಡುಗಡೆ ಮಾಡಿದರು   

ಕನಕಗಿರಿ: ಕನ್ನಡ ಭಾಷೆ ರೊಟ್ಟಿ, ಮುದ್ದೆ ಇದ್ದಂತೆ. ಇಂಗ್ಲಿಷ್ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ. ಹೀಗಾಗಿ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿತಿಳಿಸಿದರು.

ಕೊಟ್ಟೂರಿನ ಬನ ಹಾಗೂ ಕನಕಗಿರಿಯ ಸಮೀರ್ ಪ್ರಕಾಶನ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಇಮಾಮಸಾಹೇಬ್ ಹಡಗಲಿ ಅವರ ಅನುವಾದಿತ ಕೃತಿ ಮಿರ್ಜಾ ಗಾಲಿಬ್‌ ಅನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯುವಕರು ಮೊಬೈಲ್‌ ಬಳಕೆ ಕಡಿಮೆ ಮಾಡಿ ಪತ್ರಿಕೆ, ಪುಸ್ತಕಗಳನ್ನು ಖರೀದಿಸಿ ಓದುವ ಹವಾಸ್ಯ ಬೆಳೆಸಿಕೊಳ್ಳಬೇಕು ಅವರು ಸಲಹೆ ನೀಡಿದರು.

ADVERTISEMENT

ಲೇಖಕ ಡಾ.ರಾಜಶೇಖರ ಮಠಪತಿ (ರಾಗಂ) ಮಾತನಾಡಿ, ಕನಸುಗಳಿಲ್ಲದೆ ಕಾವ್ಯ ಅರಳುವುದಿಲ್ಲ. ಶ್ರೀಮಂತಿಕೆಯ ಸಾಹಿತ್ಯ ರಚಿಸುವ ಕನಸು ಕಂಡು ಸಾಕಾರಗೊಳಿಸುವ ಕಡೆಗೆ ಆಸಕ್ತಿ ಬೆಳಸಿಕೊಳ್ಳಬೇಕೆಂದು ಹೇಳಿದರು.

ಸ್ವಾಭಿಮಾನದ ಕಾವ್ಯವು ಹೆಚ್ಚು ಕಾಲ ಉಳಿಯುತ್ತದೆ. ಕವಿ ಮಿರ್ಜಾ ಗಾಲಿಬ್‌ರು ಸ್ವಾಭಿಮಾನದಿಂದ ಬದುಕಿ ಶಕ್ತಿಯುತ ಕಾವ್ಯ ರಚಿಸುವ ಮೂಲಕ ಇಲ್ಲಿಯವರೆಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಆಳವಾದ ಅಧ್ಯಯನ, ಶ್ರದ್ದೆಯಿಂದ ಉತ್ತಮ ಕೃತಿ ಹೊರಬರುತ್ತದೆ. ಲೇಖಕ ಹಡಗಲಿ ಅವರು ಆಳವಾದ ಅಧ್ಯಯನ ಮಾಡಿ ಒಳ್ಳೆಯ ಕೃತಿಯನ್ನು ಹೊರ ತಂದಿದ್ದಾರೆ ಎಂದು ತಿಳಿಸಿದರು.

ರಂಗಕರ್ಮಿ ಸಂಧ್ಯರಾಣಿ ಮಾತನಾಡಿ, ಕಾವ್ಯ ರಚನೆಗೆ ಉರ್ದು ಹೇಳಿ ಮಾಡಿದ ಭಾಷೆಯಾಗಿದೆ ಎಂದರು.

ಲೇಖಕ ಇಮಾಮಸಾಹೇಬ್‌ ಹಡಗಲಿ, ಸಾಹಿತಿ ಅಲ್ಲಾಗಿರಿರಾಜ, ಕೃಷಿಕ ಡಾ. ಶೇಷಗಿರಿ ಗುಬ್ಬಿ, ಪ್ರಾಂಶುಪಾಲ ಬಸವರಾಜ ಬಡಿಗೇರ ಮಾತನಾಡಿದರು. ಉಪನ್ಯಾಸಕರಾದ ಆರೀಪ್ ಆಹ್ಮದ, ಶೇಖಬಾಬ ಇದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಶೇಷಗಿರಿ ಗುಬ್ಬಿ, ( ಕೃಷಿ), ಪದ್ಮಿನಿ ಅಚ್ಚಿ ( ನೃತ್ಯ), ಎಂ. ಕೆ. ಉಲ್ಲಾಸ ( ಕಲೆ–ವಿನ್ಯಾಸ) ಹಾಗೂ ಜಲೀಲಪಾಷ ಮುದ್ದಾಬಳ್ಳಿ (ಸಂಗೀತ) ಅವರಿಗೆ ಸುವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಪದ್ಮಿನಿ ಅಚ್ಚಿ ಅವರ ತಂಡದವರು ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.