ADVERTISEMENT

ಗೋನಾಲ: ದುರ್ಗಾದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:47 IST
Last Updated 30 ಜನವರಿ 2026, 5:47 IST
ವಡಗೇರಾ ತಾಲ್ಲೂಕಿನ ಪ್ರಸಿದ್ಧ ಗೋನಾಲ ಗ್ರಾಮದ ಆದಿಶಕ್ತಿ ದುರ್ಗಾದೇವಿ ರಥೋತ್ಸವ ಸಂಭ್ರಮದಿಂದ ಜರುಗಿತು
ವಡಗೇರಾ ತಾಲ್ಲೂಕಿನ ಪ್ರಸಿದ್ಧ ಗೋನಾಲ ಗ್ರಾಮದ ಆದಿಶಕ್ತಿ ದುರ್ಗಾದೇವಿ ರಥೋತ್ಸವ ಸಂಭ್ರಮದಿಂದ ಜರುಗಿತು   

ವಡಗೇರಾ: ತಾಲ್ಲೂಕಿನ ಪ್ರಸಿದ್ಧ ಗೋನಾಲ ಗ್ರಾಮದ ಆದಿಶಕ್ತಿ ದುರ್ಗಾದೇವಿ ಜಾತ್ರೆ ಮಂಗಳವಾರ  ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ 4 ಗಂಟೆಗೆ ಕೈಯಿಂದ ಪಾಯಸ ತಿರುಗಿಸುವ ಪವಾಡ ಕಾರ್ಯಕ್ರಮದ ಬಳಿಕ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಭಕ್ತರು ಬೇಡಿಕೊಂಡಿದ್ದ ಹರಕೆ, ಮಕ್ಕಳ ಜವಳ ಕಾರ್ಯ ನಡೆದವು. ಸಂಜೆ 5.30ಕ್ಕೆ ದುರ್ಗಾದೇವಿ ರಥೋತ್ಸವ ಸಂಭ್ರಮದಿಂದ ಜರುಗಿತು.

ಸರ್ವಾಲಂಕೃತ ತೇರು ಮುಂದೆ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕಬ್ಬಿನ ತುಣುಕುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ADVERTISEMENT

ರಥೋತ್ಸವದ ನಂತರ ಜೋಗುತಿ ಕುಣಿತ, ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಹಾಗೂ ದಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಸಮಿತಿ ಆಯೋಜಿಸಿತ್ತು. 

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ,ಗುಜರಾತ ಸೇರಿದಂತೆ ವಿವಿಧ ಭಾಗಗಳ ಭಕ್ತರು, ಜನಪ್ರತಿನಿಧಿಗಳು, ವಿವಿಧ ಪಕ್ಷದ ರಾಜಕೀಯ ಮುಖಂಡರು ಆಗಮಿಸಿದ್ದರು.

ಜಾತ್ರೆಯಲ್ಲಿ ಬೆಂಡು, ಬೆತಾಸು, ಮಂಡಾಳು, ಬೆಲ್ಲದ ಜಿಲೇಬಿ, ಖಾರಾ ಭಜಿ ಖರೀದಿ ಹಾಗೂ ಮಕ್ಕಳ ಆಟಿಕೆ ಸಾಮಾನುಗಳ ವ್ಯಾಪಾರ ಜೋರಾಗಿತ್ತು. ಮಕ್ಕಳು ಜೋಕಾಲಿ, ತೊಟ್ಟಿಲಿನಲ್ಲಿ ಕುಳಿತು ಕುಪ್ಪಳಿಸಿ ಸಂಭ್ರಮಿಸಿದರು.

ಪರಸ್ಥಳದಿಂದ ಬಂದ ಭಕ್ತರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಯಾದಗಿರಿ ಸಿಪಿಐ ಸುನಿಲ್ ಮೂಲಿಮನಿ ಮಾರ್ಗದರ್ಶನದಲ್ಲಿ ವಡಗೇರಾ ಪಿಎಸ್ಐ ಮಹೆಬೂಬ್ ಅಲಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.