ಸಾಂದರ್ಭಿಕ ಚಿತ್ರ
ಕುಷ್ಟಗಿ: ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರೂ ಸೇರಿದಂತೆ ಅನರ್ಹರೂ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಪಡಿತರ ಚೀಟಿ ಹೊಂದಿರುವುದು ತಾಲ್ಲೂಕಿನಲ್ಲಿ ಕಂಡುಬಂದಿದೆ.
ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್ ಆಗಿ ಪರಿವರ್ತಿಸಿರುವ ವಿಷಯ ರಾಜ್ಯದಲ್ಲಿ ಚರ್ಚೆಯಲ್ಲಿದ್ದು, ತಾಲ್ಲೂಕಿನಲ್ಲೂ ಆಹಾರ ಇಲಾಖೆ ಪರಿಶೀಲನೆಯಲ್ಲಿ ತೊಡಗಿದ್ದು, ಅನರ್ಹ ಪಡಿತರ ಚೀಟಿದಾರರನ್ನು ಜಾಲಾಡುತ್ತಿದೆ. ಅಂತಹವರನ್ನು ಪತ್ತೆ ಮಾಡಿ ಕಾರ್ಡ್‌ಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೂ ಕನಿಷ್ಠ ಆರೇಳು ತಿಂಗಳಿನಿಂದಲೂ 1,250 ಜನರು ನ್ಯಾಯಬೆಲೆ ಅಂಗಡಿಗಳತ್ತ ಸುಳಿದಿಲ್ಲ. ಒಟ್ಟಾರೆ ಪಡಿತರ ವಸ್ತುಗಳನ್ನೂ ಪಡೆಯದಿರುವುದು ಗೊತ್ತಾಗಿದೆ. ಅಂತಹ ಬಿಪಿಎಲ್ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ತಾತ್ಕಾಲಿಕ ಸ್ಥಗಿತಗೊಳಿಸಿದೆ.
ಪಡಿತರ ಒಯ್ಯದವರ ಪೈಕಿ ಈಗ 43 ಜನರು ಅರ್ಜಿ ಸಲ್ಲಿಸಿದ್ದು, ವಿವಿಧ ಕಾರಣಗಳಿಂದಾಗಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. ಹೀಗಾಗಿ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಪುನಃ ಚಾಲನೆಗೊಳಿಸುವಂತೆ ಆಹಾರ ಇಲಾಖೆಗೆ ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಸಂಬಂಧಿಸಿದಂತೆ ಸ್ಥಾನಿಕ ಪರಿಶೀಲನೆ ನಡೆಸಲಾಗುತ್ತದೆ. ಒಂದೊಮ್ಮೆ ಬಿಪಿಎಲ್‌ಗೆ ಅರ್ಹರಾಗಿದ್ದರೆ ಮಾತ್ರ ಅವರ ಕಾರ್ಡ್‌ಗಳನ್ನು ಮುಂದುವರಿಸಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದರು.
ಅಷ್ಟೇ ಅಲ್ಲದೆ 124 ಜನ ಬಿಪಿಎಲ್ ಕಾರ್ಡುದಾರರು ಆದಾಯ ತೆರಿಗೆ ಪಾವತಿಸುತ್ತಿರುವುದು ಗೊತ್ತಾಗಿದ್ದು, ಅವೆಲ್ಲ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಅದೇ ರೀತಿ ಕುಷ್ಟಗಿ, ಹನುಮನಾಳದಲ್ಲಿ ಇಬ್ಬರು, ಹಿರೇಮುರ್ತಿನಾಳ, ಕಿಲಾರಟ್ಟಿ, ಹಿರೇಗೊಣ್ಣಾಗರ, ಪಟ್ಟಲಚಿಂತಿ, ಹುಲ್ಸಗೇರಾ, ಬೀಳಗಿ, ಕೊರಡಕೇರಾ, ಹಿರೇಬನ್ನಿಗೋಳ, ದೋಟಿಹಾಳ, ಬಳೂಟಗಿ, ತಾವರಗೇರಾ, ಅಡವಿಭಾವಿ ಈ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿನ 19 ಜನ ಸರ್ಕಾರಿ ನೌಕರರೂ ಬಿಪಿಎಲ್ ಕಾರ್ಡುದಾರರಾಗಿರುವುದು ಬೆಳಕಿಗೆ ಬಂದಿದ್ದು ಎಲ್ಲವನ್ನೂ ಎಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ.
ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಲು ಅರ್ಜಿ ಸಲ್ಲಿಸುವುದಕ್ಕೆ ಅನರ್ಹರಿಗೆ ಈ ಹಿಂದೆ ಸರ್ಕಾರ ಅವಕಾಶ ನೀಡಿತ್ತು. ಕೆಲವರು ಎಪಿಎಲ್‌ಗೆ ಬದಲಾಗಿದ್ದಾರೆ. ಆದರೂ ಇನ್ನೂ ಕೆಲವರು ಬಿಪಿಎಲ್ ಕಾರ್ಡುದಾರರಾಗಿಯೇ ಚಾಲ್ತಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರು ಸೇರಿದಂತೆ ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವುದು ಸ್ಥಳೀಯವಾಗಿ ಗಮನಕ್ಕೆ ಬಂದಿದ್ದರೂ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಆ ವಿಷಯವನ್ನು ಆಹಾರ ಇಲಾಖೆಯ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.