ಅಂಜನಾದ್ರಿ ಬೆಟ್ಟ (ಕೊಪ್ಪಳ ಜಿಲ್ಲೆ): ಮೈ ಕೊರೆಯುವ ಚಳಿಯ ನಡುವೆಯೂ ಅಪಾರ ಸಂಖ್ಯೆಯಲ್ಲಿ ಭಕ್ತರು ಹನುಮ ಜನಿಸಿದ ನಾಡು ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಬುಧವಾರ ಮಾಲೆ ವಿಸರ್ಜನೆ ಮಾಡಿದರು.
ಮಂಗಳವಾರ ರಾತ್ರಿಯಿಂದಲೇ ಮಾಲೆ ವಿಸರ್ಜನೆ ಆರಂಭವಾಗಿದ್ದು ಬುಧವಾರ ಬೆಳಗಿನ ಜಾವದಿಂದ ಭಕ್ತರು, ಅದರಲ್ಲಿಯೂ ಯುವ ಮಾಲಾಧಾರಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿತ್ತು.
ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಕೊಪ್ಪಳ ಜಿಲ್ಲೆ ಹಾಗೂ ನೆರೆಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಬಂದ ಭಕ್ತರು ಸೂರ್ಯೋದಯಕ್ಕೂ ಮೊದಲು 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದು ಕೊರಳಲ್ಲಿ ಧರಿಸಿದ್ದ ತುಳಸಿ ಮಾಲೆಯನ್ನು ವಿಸರ್ಜನೆ ಮಾಡಿದ್ದರು.
ಮಂಗಳವಾರ ರಾತ್ರಿ ವೇಳೆಗೆ ಸುಮಾರು 40 ಸಾವಿರದಷ್ಟು ಮಾತ್ರ ಇದ್ದ ಮಾಲಾಧಾರಿಗಳ ಸಂಖ್ಯೆ ಬೆಳಗಿವ ಜಾವದ ವೇಳೆಗೆ ಲಕ್ಷಾಂತರಕ್ಕೆ ತಲುಪಿತ್ತು. ಅಂಜನಾದ್ರಿ ಬೆಟ್ಟ ಏರುವಾಗ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಪೊಲೀಸರು ಬೆಟ್ಟದ ಕೆಳಭಾಗದಲ್ಲಿಯೇ ಮಾಲಾಧಾರಿಗಳ ತಂಡಗಳನ್ನಾಗಿ ಮಾಡಿ ಹಂತಹಂತವಾಗಿ ಬೆಟ್ಟಕ್ಕೆ ಕಳಿಸಿದ್ದರಿಂದ ಭಕ್ತರಿಗೆ ದರ್ಶನ ಸರಾಗವಾಯಿತು. ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಹೆಚ್ಚುವರಿ ಎಸ್.ಪಿ. ಹೇಮಂತಕುಮಾರ್ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳೆ ಎರಡು ದಿನಗಳಿಂದ ಅಂಜನಾದ್ರಿಯಲ್ಲಿ ಮೊಕ್ಕಾ ಹೂಡಿದ್ದಾರೆ. ಎಲ್ಲರಿಗೂ ದರ್ಶನಕ್ಕೆ ಅವಕಾಶ ಸಿಗುತ್ತದೆ, ಯಾರೂ ಅವಸರ ಮಾಡಬಾರದು ಎಂದು ಮನವಿ ಮಾಡಿದರು.
ವಿಶೇಷ ಪೂಜೆ: ಹನುಮದ್ ವ್ರತ ಅಂಗವಾಗಿ ಅಂಜನಾದ್ರಿ ಮೂರ್ತಿಗೆ ಬೆಳಗಿವ ಜಾವವೇ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ರಾಜ್ಯದ ಬೆಳಗಾವಿ, ಕಲಬುರಗಿ, ಗದಗ, ಹಾವೇರಿ, ದಾವಣಗೆರೆ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.