ಕೊಪ್ಪಳ: ತಾಲ್ಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿಯಲ್ಲಿ ವಿದ್ಯುತ್ ಪರಿಕರ ಮತ್ತು ತಂತಿ ತೆರವು ಮಾಡದ ಕಾರಣಕ್ಕಾಗಿ ಶಾಲಾ ಕಟ್ಟಡ ಅನಾಥವಾಗಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಈಗ ಅದನ್ನು ತೆರವು ಮಾಡಿದ್ದಾರೆ.
ಆಯೋಗದ ಸದಸ್ಯರಾದ ಕೆ.ಟಿ. ತಿಪ್ಪೇಸ್ವಾಮಿ ಹಾಗೂ ಶೇಖರಗೌಡ ಜಿ. ರಾಮತ್ನಾಳ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ಸರ್ಕಾರಿ ಶಾಲೆಯ ಕಟ್ಟಡದ ಮೇಲೆ ವಿದ್ಯುತ್ ಪರಿಕರ ಇದ್ದ ಕಾರಣ ಕಟ್ಟಡ ಇದ್ದೂ ಇಲ್ಲದಂತಾದ ಸ್ಥಿತಿ ಗೊತ್ತಾಗಿತ್ತು. ಶಾಲಾ ಆವರಣದಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಎರಡ್ಮೂರು ಕಡೆ ತಂತಿ ಹಾದು ಹೋಗಿದ್ದರಿಂದ ಆ ಸ್ಥಳಕ್ಕೆ ಹೋಗಲು ಮಕ್ಕಳು ಹಾಗೂ ಪೋಷಕರು ಹಿಂದೇಟು ಹಾಕುತ್ತಿದ್ದರು.
ಈ ಸಮಸ್ಯೆಯನ್ನು ಆಯೋಗದ ಸದಸ್ಯರು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಗಮನಕ್ಕೆ ತಂದಿದ್ದರು. ವಾರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅವರು ಹೇಳಿದ್ದರು.
‘ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಒಂದು ವಾರದಲ್ಲಿಯೇ ಪರಿಹಾರವಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ತ್ವರಿತ ಕ್ರಮ ಕೈಗೊಂಡಿದ್ದು ಖುಷಿ ನೀಡಿದೆ’ ಎಂದು ರಾಮತ್ನಾಳ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.